ಶಿವಮೊಗ್ಗ: ಬಸವನಗೌಡ ಪಾಟೀಲ್ ಯತ್ನಾಳ್ ಅವರು ಆತ್ಮರತಿಯ ರೋಗದಿಂದ ಬಳಲುತ್ತಿದ್ದಾರೆ. ಅವರು ಶಿವಮೊಗ್ಗಕ್ಕೆ ಬಂದ್ರೆ ಒಳ್ಳೆಯ ಚಿಕಿತ್ಸೆ ಕೊಡಿಸುವುದಾಗಿ ಎಂಎಲ್ಸಿ ಆಯನೂರು ಮಂಜುನಾಥ್, ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಕಳೆದು ಹೋಗುತ್ತೇನೆ ಎಂದಾಗ ಈ ರೀತಿ ಸಿಎಂ ಬದಲಾವಣೆಯ ಕುರಿತು ಹೇಳಿಕೆ ನೀಡುತ್ತಾರೆ. ಖಾಯಿಲೆಗಳಲ್ಲಿ ಆತ್ಮರತಿ ಎಂಬ ಖಾಯಿಲೆ ಇದ್ದು, ಅದು ಯತ್ನಳ್ಗೆ ಇದೆ. ತನ್ನನ್ನು ತಾನು ವೈಭವೀಕರಿಸಿಕೊಂಡು ಹೇಳಿಕೆ ನೀಡುವುದೇ ಆತ್ಮರತಿಯಾಗಿದೆ.
ಯತ್ನಳ್ರನ್ನು ಯಾರೂ ಸಹ ಹೊಗಳುವುದಿಲ್ಲ. ಅವರಿಗೆ ಮಾನಸಿಕ ಖಾಯಿಲೆ ಇದ್ದು, ಅವರಿಗೆ ಅಪಾಯಕಾರಿಯಾಗಿದೆ. ಯತ್ನಾಳ್ ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇದರಿಂದ ಸ್ನೇಹಿತನ ಹಿತದೃಷ್ಟಿಯಿಂದ ಹೇಳಿಕೆ ನೀಡುತ್ತಿದ್ದೇನೆ ಎಂದರು.
ಅವರಿಗೆ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಅವರೇ ಆದಷ್ಟು ಬೇಗ ಶಿವಮೊಗ್ಗಕ್ಕೆ ಬರಲಿ, ಇಲ್ಲಿ ಒಳ್ಳೆಯ ವೈದ್ಯರಿದ್ದಾರೆ ಎಂದು ಆಹ್ವಾನಿಸುತ್ತೇನೆ ಎಂದರು. ಅವರು ನನ್ನ ಜೊತೆ ಇನ್ನಷ್ಟು ದಿನ ಇರಬೇಕು ಎಂದರು. ಆತ್ಮರತಿಯ ರೋಗದಿಂದ ನರಳುತ್ತಿರುವ ಮಾನಸಿಕ ಖಾಯಿಲೆಯಿಂದ ಹೊರತರಲು ಚಿಕಿತ್ಸೆ ಬೇಕಾಗಿದೆ. ಯತ್ನಾಳ್ರವರಿಗೆ ರಾಜಕೀಯ ಅಭದ್ರತೆ ಕಾಡಿದಾಗ ಸಿಎಂ ಬದಲಾವಣೆಯ ಮಾತುಗಳನ್ನು ಆಡುತ್ತಾರೆ.
ಸಿಎಂ ಸ್ಥಾನದಿಂದ ಬಿಎಸ್ವೈರನ್ನು ಕೆಳಗೆ ಇಳಿಸುವ ಯೋಚನೆ ಯಾರಿಗೂ ಇಲ್ಲ:
ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗೆ ಇಳಿಸುವ ಸ್ಥಿತಿಯಾಗಲಿ, ಆಲೋಚನೆಯಾಗಲಿ ಯಾರಿಗೂ ಇಲ್ಲ. ಯಡಿಯೂರಪ್ಪ ಓರ್ವ ಸಮರ್ಥ ನಾಯಕರಾಗಿದ್ದಾರೆ. ಯಡಿಯೂರಪ್ಪ ಮಾಸ್ ಲೀಡರ್, ಅವರಿಗೆ ಬಹಳ ಜನ ಹಿಂಬಾಲಕರಿದ್ದಾರೆ. ಇದು ಅಶಕ್ತರ ಬಡಬಡಿಕೆಯ ಮಾತುಗಳಾಗಿವೆ. ಇಂತಹ ಮಾತುಗಳಿಗೆ ಅರ್ಥವಿರುವಂತೆ ಕಾಣುತ್ತಿಲ್ಲ ಎಂದರು. ಯತ್ನಾಳ್ ಸಿಎಂ ವಿರುದ್ಧ ಪಕ್ಷದ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಕೆ ಎಸ್ ಈಶ್ವರಪ್ಪನವರು ತಮ್ಮ ಸಮುದಾಯದ ಹಿತ ಬಯಸಿ, ಸಭೆಗಳನ್ನು ನಡೆಸಿದ್ದಾರೆ. ಈಶ್ವರಪ್ಪ ಹಾಗೂ ಯತ್ನಾಳ್ ಅವರಿಗೆ ಬಹಳ ವ್ಯತ್ಯಾಸವಿದೆ ಎಂದರು. ಉಪ ಚುನಾವಣೆಯ ಬಳಿಕ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಳ್ಳಲಿದೆ ಎಂದರು.
ನಾನು ಮಂತ್ರಿಯಾಗಬೇಕೆಂಬ ಆಸೆ ಇದೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದರೆ ನಾನು ಮಂತ್ರಿಯಾಗಬೇಕೆಂಬ ಆಸೆ ಇದೆ ಎಂದರು. ಅದರಲ್ಲೂ ಉನ್ನತ ಶಿಕ್ಷಣ ಸಚಿವರ ಸ್ಥಾನ ನೀಡಲಿ ಎಂದರು. ಆಗ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುತ್ತೇನೆ. ನಾವು ಸರ್ಕಾರದ ಒಂದು ಭಾಗವಾಗಿ ಇದ್ದರೆ ಸಾಕು ಎಂದರು. ಪಕ್ಷದವರಾಗಿರುವ ನಮಗೆ ಮಂತ್ರಿಗಳಾಗಲೇಬೇಕೆಂದಿಲ್ಲ. ನನಗೆ ಮಂತ್ರಿ ಸ್ಥಾನದ ಅವಕಾಶ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಮಂಜುನಾಥ್ ಹೇಳಿದರು.