ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಖಾಸಗೀಕರಣ ಮಾಡುತ್ತಿರುವ ಕೇಂದ್ರದ ನೀತಿ ಖಂಡಿಸಿ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಸ್ಥರು ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಕಾಯಂ ಹಾಗೂ ಗುತ್ತಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ಹಾಗೂ ಕಾಂಗ್ರೆಸ್ ಮುಖಂಡ ಬಿ.ಕೆ.ಮೋಹನ್ ಸಾಥ್ ನೀಡಿದರು. ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದ್ರೆ ಸಂಸದರು ಬೆಂಗಳೂರಿಗೆ ತೆರಳಿದ್ದರಿಂದ ಮನೆಗೆ ಮುತ್ತಿಗೆ ಹಾಕುವುದನ್ನು ರದ್ದು ಮಾಡಿ ಕಾರ್ಖಾನೆಯ ಮುಂದೆಯೇ ಪ್ರತಿಭಟನೆ ನಡೆಸಿದರು.
ಇನ್ನು ಪ್ರತಿಭಟನಾಕಾರರ ಮನವೊಲಿಸಲು ಸಂಸದರ ಪರವಾಗಿ ಬಿಜೆಪಿ ರೈತ ಮೂರ್ಚಾದ ರಾಜ್ಯ ಉಪಾಧ್ಯಕ್ಷ ದತ್ತಾತ್ತ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ತೆರಳಿದ್ದರು. ಈ ವೇಳೆ ನೀವು ಸುಳ್ಳು ಹೇಳಿದ್ದು ಸಾಕು. ಚುನಾವಣೆಗೂ ಮೊದಲು ಕಾರ್ಖಾನೆ ಉಳಿಸುತ್ತೇವೆ ಎಂದವರು ಈಗ ಕೇಂದ್ರದ ಪಾಲಿಸಿ ಅಂತ ಹೇಳ್ತಾ ಇದ್ದೀರಿ ಎಂದು ಕಾರ್ಮಿಕರು ತರಾಟೆಗೆ ತೆಗೆದುಕೊಂಡ್ರು. ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ ಕಾರಣ ಬಿಜೆಪಿ ಮುಖಂಡರು ಮನೆಗೆ ವಾಪಸ್ ತೆರಳಿದರು.