ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದಾಗಿ ಮೇಯರ್ ಸುವರ್ಣ ಶಂಕರ್ ಘೋಷಿಸಿದರು.
ನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಗೋಹತ್ಯೆ ಮಾಡುವವರ ವಿರುದ್ಧ ಕಾಯ್ದೆಯಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಗೋ ಸಂರಕ್ಷಣೆಗಾಗಿ ಶಿವಮೊಗ್ಗ ಪಾಲಿಕೆ ₹50 ಲಕ್ಷ ಅನುದಾನ ತೆಗೆದಿರಿಸಿದೆ.
ಜಿಲ್ಲಾಡಳಿತ ಕೂಡ ಚೆಟ್ನಳ್ಳಿಯಲ್ಲಿ ಸರ್ವೇ ನಂ.76ರಲ್ಲಿ 5 ಎಕರೆ ಜಾಗವನ್ನು ಗೋ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದು, ಪಾಲಿಕೆಯಿಂದ ಅಲ್ಲಿ ಗೋ ಸಂರಕ್ಷಣೆಯ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಇನ್ನು, ಮುಂದೆ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದೇ ಒಂದು ಗೋ ಹತ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಇದಕ್ಕೆ ವಿಪಕ್ಷ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದಲ್ಲೇ ಅತಿ ಹೆಚ್ಚು ಗೋ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ, ಮೊದಲು ಅದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ವಿರೋಧ ಪಕ್ಷದ ಸದಸ್ಯರು ಗರಂ
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ವಿರೋಧ ಪಕ್ಷದ ಸದಸ್ಯ ರಮೇಶ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ ಇನ್ನೂ ಯುಜಿಡಿ ಮತ್ತು ಯುಜಿ ಕೇಬಲ್ ಟೆಂಡರ್ ಆಗಿಲ್ಲ.
ಯಾವುದೇ ಕಾಮಗಾರಿ ನಡೆಸುವಾಗಲೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಇದರಿಂದ ಸಾರ್ವಜನಿಕರ ಎದುರಿಗೆ ವಾರ್ಡ್ ಸದಸ್ಯರು ತಲೆ ತಗ್ಗಿಸುವಂತಾಗಿದೆ.
ಓದಿ-ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕಿಡಿ
ಅಲ್ಲದೆ, ನಗರವೆಲ್ಲ ಧೂಳು ಮಯವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕೊರೊನಾ ಇಲ್ಲದಿದ್ದರೂ ಧೂಳಿನಿಂದ ಬರುವ ಕಾಯಿಲೆಯ ಭಯಕ್ಕೆ ಮಾಸ್ಕ್ ಹಾಕುವ ಅನಿವಾರ್ಯತೆಯಿದೆ. ನಗರ ನೀರು ಸರಬರಾಜು ಮಂಡಳಿ, ಮೆಸ್ಕಾಂ, ಯುಜಿ ಕೇಬಲ್, ದೂರವಾಣಿ ಕೇಬಲ್ ಹಾಕಲು ಕಾಂಕ್ರೀಟ್ ರಸ್ತೆಗಳನ್ನು ಅಗೆಯಲಾಗುತ್ತಿದೆ.
ಅಧಿಕಾರಿಗಳ ನಡುವೆ ಪರಸ್ಪರ ಸಂಪರ್ಕ ಇಲ್ಲದ್ದರಿಂದ ಬೇಕಾ ಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿಯೊಳಗೆ ಕಾಮಗಾರಿ ಮುಗಿಸದಿದ್ದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದಂಡ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ 500 ಕೋಟಿ ರೂ. ವಾಪಾಸು ಹೋಗಿದ್ದು, ನಿಗಧಿತ ಅವಧಿಯೊಳಗೆ ಕೆಲಸ ಮಾಡುವಂತೆ ಕ್ರಮಕೈಗೊಳ್ಳಿ ಎಂದರು. ಸಭೆಯಲ್ಲಿ ಉಪಮೇಯರ್ ಸುರೇಖಾ ಮುರಳಿಧರ್, ಆಯುಕ್ತ ಚಿದಾನಂದ ವಠಾರೆ ಉಪಸ್ಥಿತರಿದ್ದರು.