ಶಿವಮೊಗ್ಗ: ಚುನಾವಣಾ ಆಯೋಗ ಚುನಾವಣೆ ನಡೆಸಲು ತಯಾರಿದ್ದರೆ ನಾವು ಅದಕ್ಕೆ ಸಿದ್ದರಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಡಿಸೆಂಬರ್ ವೇಳೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಸರ್ಕಾರದ ಮುಂದೆ ಮೂರು ಆಯ್ಕೆಗಳಿವೆ. ಹಾಲಿ ಇರುವರನ್ನು ಮುಂದುವರೆಸುವುದು ಹಾಗೂ ಆಡಳಿತಾಧಿಕಾರಿ ಅಧಿಕಾರಿಯನ್ನು ನೇಮಿಸುವುದು ಮತ್ತು ನಾಮ ನಿರ್ದೇಶನ ಮಾಡುವುದು. ಹಾಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.
ಚುನಾವಣಾ ಆಯೋಗ ಚುನಾವಣೆ ನಡೆಸಲು ತಯಾರಿದ್ದರೆ ನಾವು ಅದಕ್ಕೆ ಸಿದ್ದರಿದ್ದೇವೆ. ಇಲ್ಲವಾದರೆ ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆ ಪ್ರತಿಪಕ್ಷದವರಿಗೆ ಗಾಬರಿ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರತಿನಿಧಿಗಳನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಪದೇ ಪದೆ ಹೇಳುತ್ತಿದ್ದಾರೆ. ಆದರೆ, ಈ ಮಾತನ್ನು ಹೇಳಲಿಕ್ಕೆ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ ಎಂದರು.
ಈ ಹಿಂದೆ ಶಿವಮೊಗ್ಗ ನಗರಸಭೆಯಲ್ಲಿ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಆ ಸಂದರ್ಭದಲ್ಲಿ ಚುನಾಯಿತ ಸಮಿತಿಯನ್ನು ರದ್ದುಪಡಿಸಿ ಮಹಾನಗರ ಪಾಲಿಕೆಯನ್ನಾಗಿ ಮಾಡಿ, ಮೇಯರ್, ಉಪ ಮೇಯರ್ ಹಾಗೂ 35 ಸದಸ್ಯರನ್ನು ಕಾಂಗ್ರೆಸ್ ಪಕ್ಷದವರನ್ನೇ ನೇಮಿಸಿತ್ತು. ಹಾಗಾಗಿ ಕಾಂಗ್ರೆಸ್ಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲಿಕ್ಕೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರಿಗೆ ಕ್ಷೇಮೆ ಕೇಳಬೇಕು ಎಂದರು. ಪ್ರಜಾಪ್ರಭುತ್ವ ಎನ್ನುವ ಪದ ನಿಮ್ಮ ಬಾಯಲ್ಲಿ ಬರಬಾರದು ಎಂದು ರೇಗಿದರು.