ಶಿವಮೊಗ್ಗ: ಕಂಟೇನ್ಮೆಂಟ್ ಝೋನ್ ಒಳಗೆ ಹೊರಗಿನವರೊಬ್ಬರು ಅತಿಕ್ರಮಣ ಪ್ರವೇಶ ಮಾಡಿ ಕರ್ತವ್ಯದಲ್ಲಿದ್ದ ಮಹಿಳಾ ಪಿಡಿಒಗೆ ಬೆದರಿಕೆ ಹಾಕಿರುವ ಘಟನೆ ಸಾಗರ ತಾಲೂಕಿನ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಾಳಸರ ಗ್ರಾಮದಲ್ಲಿ ನಡೆದಿದೆ. ಕಂಚಾಳಸರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು.
ಆದರೆ ಶಿಕಾರಿಪುರ ತಾಲೂಕಿನ ಇಟ್ಟಿಗೆಹಳ್ಳಿ ತಾಂಡಾದಿಂದ ಬಂದ ನಾಲ್ವರು ಕಂಟೇನ್ಮೆಂಟ್ ಝೋನ್ ಒಳಗೆ ಮನೆಯೊಂದನ್ನು ನಿರ್ಮಿಸಲಾಗುತ್ತಿದೆ. ಅಲ್ಲಿಗೆ ಇಟ್ಟಿಗೆ ಇಳಿಸುವುದಕ್ಕೆ ಟ್ರ್ಯಾಕ್ಟರ್ನಲ್ಲಿ ಬಂದಿದ್ದೇವೆ ಎಂದು ಒಳ ಪ್ರವೇಶಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪಿಡಿಒ ವಾಣಿಶ್ರೀಗೆ ತಿಳಿಸಿದ್ದಾರೆ. ಪಿಡಿಒ ಸ್ಥಳಕ್ಕೆ ಬಂದು ಪ್ರಶ್ನಿಸಿದಾಗ, ಜೈದೇವ್ ಗೌಡ ಪಾಟೀಲ್ ಎಂಬುವವರು ನಾನು ಸಮಾಜ ಕಲ್ಯಾಣ ಇಲಾಖೆ ನೌಕರ. ನಮಗೂ ಕಾನೂನು ತಿಳಿದಿದೆ ಎಂದು ಬೆದರಿಕೆ ಹಾಕಿ ಕಂಟೇನ್ಮೆಂಟ್ ಝೋನ್ ಬೇಲಿ ಕೀಳಲು ಯತ್ನಿಸಿದ್ದಾರೆ. ಜೊತೆಗೆ ಪಿಡಿಒ ವಾಣಿಶ್ರೀ ಅವರನ್ನು ನಿಂದಿಸಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಾಣಿಶ್ರೀ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರೇಣುಕಾಚಾರ್ಯ ಮೇಲೆ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಸೋಂಕಿತರ ಆಕ್ರೋಶ