ಶಿವಮೊಗ್ಗ: ಚುನಾವಣೆಯಲ್ಲಿ ಹಣ, ಹೆಂಡದ ಆಮಿಷ ತೋರಿಸಿ ಮತ ಗಿಟ್ಟಿಸಿಕೊಳ್ಳುವ ಜನರ ಮಧ್ಯೆ ಸಿಎಂ ತವರು ಜಿಲ್ಲೆಯ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿಗಳು ಜನರಿಗೆ ಯಾವುದೇ ಆಸೆ, ಆಮಿಷ ತೋರಿಸುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಜ್ಞಾವಂತರ ತಾಲೂಕು ಎಂದು ಕರೆಯಿಸಿಕೊಳ್ಳುವ ತೀರ್ಥಹಳ್ಳಿಯ ಕೆಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಪರ್ಧಿಗಳು ತಾವು ಚುನಾವಣೆಯಲ್ಲಿ ಮತದಾರರಿಗೆ ಹಣ, ಹೆಂಡ ಹಾಗೂ ಆಮಿಷ ತೋರುವುದಿಲ್ಲ ಎಂದು ತಮ್ಮ ತಮ್ಮ ಗ್ರಾಮದ ದೇವಾಲಯಗಳ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.
ಹೊದಲ ಅರಳಾಪುರ, ಹೊನ್ನೆತಾಳು ಹಾಗೂ ಹಾರೋಗುಳಿಗೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಾವು ನ್ಯಾಯಸಮ್ಮತವಾದ ಚುನಾವಣೆ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಹೊನ್ನೆತಾಳು ಗ್ರಾಮ ಪಂಚಾಯತಿ ಅಭ್ಯರ್ಥಿಗಳಾದ ಜಯರಾಮ್, ಜಯಶ್ರೀ ನಿತ್ಯಾನಂದ, ಬಿ.ಬಿ.ಮಂಜುನಾಥ್, ಕಿರಣ್ ರಾಜ್, ದಿನೇಶ್ ಪೂಜಾರ್ ಹಾಗೂ ಪ್ರಭಾಕರ್ ಬಿಳಿಗೆರೆ ಪ್ರತಿಜ್ಞೆ ಮಾಡಿದರು. ಇದೇ ರೀತಿ ಇತರ ಕಡೆ ಅಭ್ಯರ್ಥಿಗಳು ಸಹ ನಡೆದುಕೊಂಡ್ರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದರು.