ಶಿವಮೊಗ್ಗ: ನೆರೆ ಹಾವಳಿಯಿಂದ ಉಂಟಾದ ನಷ್ಟದ ಪರಿಹಾರವನ್ನು ಸಮರ್ಪಕವಾಗಿ ವಿತರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ನೆರೆಯಿಂದ ಸಂಭವಿಸಿದ ಅನಾಹುತಗಳಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಸರಿಯಾಗಿ ನೀಡಿಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿತ್ತು. ಆದರೆ, ವರದಿ ನೀಡಿದ ನಂತರವೂ ಪರಿಹಾರ ಒದಗಿಸಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನಾಹುತಕ್ಕೆ ತಕ್ಕಂತೆ ₹ 10 ಸಾವಿರ, ₹ 25 ಸಾವಿರ ಹಾಗೂ ₹ 1 ಲಕ್ಷ ನೀಡಲು ₹ 50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು. ಆದ್ರೆ ಇದರಂತೆ ಪರಿಹಾರ ನೀಡಿಲ್ಲ. ಗ್ರಾಮಾಂತರ ಭಾಗದಲ್ಲಿ ಕೇವಲ ₹ 2.60 ಕೋಟಿ ಪರಿಹಾರ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಳೆ, ಪ್ರವಾಹದಿಂದ 1,127 ಮನೆಗಳು ಹಾನಿಯಾಗಿದ್ದವು. ಅಧಿಕಾರಿಗಳೂ ಸರ್ವೆ ನಡೆಸಿದ್ದರು. ಮಳೆ ನಿಂತ ಬಳಿಕ 700ಕ್ಕೂ ಹೆಚ್ಚು ಮನೆಗಳು ಉರುಳಿವೆ. ಇದರ ಸರ್ವೆ ಮಾಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಉಪ ಚುನಾವಣಾ ಪ್ರಚಾರ ಮುಗಿದ ಬಳಿಕ ಜಿಲ್ಲೆಯಲ್ಲಿ ಮನೆಗಳ ನಿರ್ಮಿಸಲು ಹಣ ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು.