ಶಿವಮೊಗ್ಗ: ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲಕಿಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿ ಲಿವರ್ ಕಸಿ ಮಾಡುವ ಮೂಲಕ ಜೀವದಾನ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ದಂಪತಿಯ ಪುತ್ರಿ 6 ವರ್ಷದ ದೀಕ್ಷಿತಾ ಅಪರೂಪದ ಲಿವರ್ ಸಂಬಂಧಿತ ಅನುವಂಶಿಕ ಕಾಯಿಲೆಯಾದ ಕಾಂಜಿನೈಟಲ್ ಹೆಪಾಟಿಸ್ ಫೈಬ್ರೋಟಿಸ್ (ಸಿಹೆಚ್ಎಫ್) ನಿಂದ ಬಳಲುತ್ತಿದ್ದಳು. ದೀಕ್ಷಿತಾಳ ತಾಯಿ ರೇವತಿ ಮಗಳಿಗೆ ಲಿವರ್ ದಾನ ಮಾಡಿದ್ದು, ವೈದ್ಯರು ಯಶಸ್ವಿ ಲಿವರ್ ಕಸಿ ಮಾಡಿದ್ದಾರೆ.
ಸಿಹೆಚ್ಎಫ್ ಸಮಸ್ಯೆಯಿಂದ ಬಳಲುವವರು ರಕ್ತವಾಂತಿ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲದೇ ಸರಿಯಾಗಿ ಊಟ ಸೇರದೇ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಅದರಂತೆ ದೀಕ್ಷಿತಾ ಕೂಡ ತನ್ನ ವಯಸ್ಸಿಗೆ ತಕ್ಕ ಹಾಗೆ ಬೆಳವಣಿಗೆಯಾಗಿರಲಿಲ್ಲ. ದೀಕ್ಷಿತಾಗೆ ಶಿವಮೊಗ್ಗದ ಮಕ್ಕಳ ಪ್ರಖ್ಯಾತ ವೈದ್ಯರಾದ ಡಾ. ಧನಂಜಯ್ ಸರ್ಜಿ ಅವರ ಬಳಿ ತಪಾಸಣೆ ಮಾಡಿಸಲಾಗುತ್ತಿತ್ತು.
ದೀಕ್ಷಿತಾಳ ಸಮಸ್ಯೆಗೆ ಲಿವರ್ ಕಸಿ ಮಾಡುವುದೊಂದೇ ಪರಿಹಾರವಾಗಿತ್ತು. ಈ ಆಪರೇಷನ್ಗೆ ಕನಿಷ್ಠ 20 ಲಕ್ಷ ರೂ. ಬೇಕಾಗಿತ್ತು. ಅಲ್ಲದೇ ಲಿವರ್ ದಾನಿಗಳು ಸಹ ಬೇಕಾಗಿತ್ತು. ಲಿವರ್ ಅನ್ನು ವೈದ್ಯರು ಸತ್ತ ವ್ಯಕ್ತಿಗಳ ದೇಹದಿಂದ ತೆಗೆಯುವುದು ಸಾಮಾನ್ಯ. ಆದರೆ, ದೀಕ್ಷಿತಾಳಿಗೆ ಲಿವರ್ ನೀಡಲು ಆಕೆಯ ತಾಯಿ ಮುಂದೆ ಬಂದಿದ್ದಾರೆ.
ಆದರೆ, ಹಣದ ಅಭಾವದಿಂದ ಆಪರೇಷನ್ ಅನ್ನು ಹೇಗೆ ನಡೆಸುವುದು ಎಂದು ಯೋಚನೆ ಮಾಡುತ್ತಿದ್ದ ಸಂದರ್ಭ ಶಿವಮೊಗ್ಗದ ಡಾ.ಧನಂಜಯ ಅವರು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಆಪರೇಷನ್ ನಡೆಸುತ್ತಾರೆ. ಈ ಆಪರೇಷನ್ ಅನ್ನು ಡಾ. ಮಲ್ಲಿಕಾರ್ಜುನ್ ಸಕ್ಪಾಲ್ ಅವರು ನಡೆಸುತ್ತಾರೆ. ದೀಕ್ಷಿತಾಳ ಮನೆಯ ಆರ್ಥಿಕ ಪರಿಸ್ಥಿಯನ್ನು ಕಂಡು ಕೇವಲ ನಾಲ್ಕು ಲಕ್ಷದಲ್ಲಿ ಚಿಕಿತ್ಸೆ ನಡೆಸುತ್ತಾರೆ. ಉಳಿದ ಹಣವನ್ನು ಎನ್ಜಿಒಗಳು ಹಾಗೂ ವಿವಿಧ ಕಂಪನಿಗಳು ಭರಿಸಿವೆ.
ಇದನ್ನೂ ಓದಿ: ಬಾಲಿವುಡ್ ನಟ ಅಜಯ್ ದೇವಗನ್ ಅಧಿಕ ಪ್ರಸಂಗತನ ಮೆರೆದಿದ್ದಾರೆ : ಹೆಚ್ ಡಿಕೆ, ಸಿದ್ದು ಕಿಡಿ
ಬಾಲಕಿಯ ತಾಯಿಯ ಲಿವರ್ನ ಒಂದು ಭಾಗವನ್ನು ತೆಗದು ಆಕೆಗೆ ಅಳವಡಿಸಲಾಗಿದೆ. ಈ ಅಪರೂಪದ ಆಪರೇಷನ್ಗೆ ಲಿವರ್ ಟ್ರಾನ್ಸ್ ಪ್ಲ್ಯಾಂಟೇಷನ್ ಎಂದು ಕರೆಯುತ್ತಾರೆ. ಇದೀಗ ದೀಕ್ಷಿತಾ ಆರೋಗ್ಯಕರವಾಗಿದ್ದು, ವೈದ್ಯರ ಕಾರ್ಯಕ್ಕೆ ಕುಟುಂಬಸ್ಥರು ಧನ್ಯವಾದ ಅರ್ಪಿಸಿದ್ದಾರೆ.