ಶಿವಮೊಗ್ಗ : ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಸಿಮ್ಸ್ ವೈದ್ಯರಿಗೆ ಸೂಚಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಕೊರೊನಾ ಸೋಂಕಿತರಿಗೆ ಮೂಲಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂಬ ದೂರು ಬಂದಿದ್ದವು. ಈ ಹಿನ್ನೆಲೆ ಇಂದು ಸಿಮ್ಸ್ ಸಭಾಂಗಣದಲ್ಲಿ ಮೆಗ್ಗಾನ್ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಆಡಳಿತದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳ ಬಗ್ಗೆ ವೈದ್ಯರಿಂದ ಸಲಹೆ-ಸೂಚನೆಗಳನ್ನು ಕೇಳಲಾಯಿತು. ಈ ಸಂದರ್ಭದಲ್ಲಿ ಡಿಗ್ರೂಪ್ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ಗಳು, ವೆಂಟಿಲೇಟರ್ಗಳ ಕೊರತೆ, ಆ್ಯಕ್ಸಿಜನ್ ಬೆಡ್ಗಳ ಕೊರತೆ ಮೊದಲಾದವುಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಿಮ್ಸ್ ಆಡಳಿತ ಮಂಡಳಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಕೋವಿಡ್ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ, ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು.
ಕೋವಿಡ್ ರೋಗಿಗಳು ಇರುವ ವಾರ್ಡ್ಗಳಲ್ಲಿ ಸಲಹಾ ಪೆಟ್ಟಿಗೆ ಸ್ಥಾಪಿಸಿ ಅದರಲ್ಲಿ ರೋಗಿಗಳ ಹೆಸರು, ಸಮಸ್ಯೆ, ಮೊಬೈಲ್ ನಂಬರ್ ದಾಖಲಿಸಿ ಆ ಪೆಟ್ಟಿಗೆಗೆ ಹಾಕುವಂತೆ ಸೂಚಿಸಬೇಕು. ಆ ಪೆಟ್ಟಿಗೆಯಲ್ಲಿ ಸಲಹೆಗಳನ್ನು ನಿತ್ಯ ಸಿಮ್ಸ್ ಆಡಳಿತ ಪರಿಶೀಲಿಸಿ, ದೂರುಗಳ ಬಗ್ಗೆ ಕೂಡಲೇ ಕ್ರಮಕೈಗೊಂಡು ಸಂಬಂಧಪಟ್ಟ ರೋಗಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಆಗ ರೋಗಿಗೂ ಸಮಾಧಾನವಾಗಬಹುದು. ಅದನ್ನು ಮೀರಿ ಏನಾದರೂ ಲೋಪಗಳಿದ್ದಲ್ಲಿ ಸರಿಪಡಿಸಲು ಕೂಡಲೇ ಕ್ರಮವಹಿಸಬೇಕು ಎಂದರು.
ಈಗಾಗಲೇ ಇನ್ನೂ 450 ಬೆಡ್ಗಳ ವ್ಯವಸ್ಥೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದ್ದು, ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 100 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಇದೇ ವೇಳೆ ಸಾವಿನ ಸಂಖ್ಯೆ ಏರುತ್ತಿರುವುದಕ್ಕೆ ಕಾರಣವೇನೆಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸ್ಯಾಂಪಲ್ ಟೆಸ್ಟ್ ಆಗುತ್ತಿವೆ. ಪಾಸಿಟಿವ್ ಸಂಖ್ಯೆಗೆ ಹೋಲಿಸಿದ್ರೆ ಸಾವಿನ ಪ್ರಮಾಣ ಬೇರೆ ಜಿಲ್ಲೆಗಳಿಗಿಂತ ಕಡಿಮೆಯಿದೆ. ಪಾಸಿಟಿವ್ ಕೇಸ್ ಪತ್ತೆಯಾಗುತ್ತಿರುವ ಏರಿಯಾಗಳಲ್ಲಿ ಎರಡೆರಡು ಆ್ಯಂಟಿಜೆನ್ ಟೆಸ್ಟ್ ಮಾಡುವ ಕ್ರಮಕೈಗೊಳ್ಳಲಾಗುವುದು ಎಂದರು.