ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಸ್ತಿ ಕ್ರೀಡಾಸಕ್ತರ ಉತ್ತೇಜನಕ್ಕಾಗಿ ಕುಸ್ತಿ ಅಖಾಡ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಂಡು ಕೋಚ್‌ಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ನಾರಾಯಣಗೌಡ ಅವರು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಎಲ್ಲ ಕ್ರೀಡಾಶಾಲೆಗಳು ಕಳೆದ 2 ವರ್ಷಗಳ ಅವಧಿಯಲ್ಲಿ ಕೊರೊನ ಸೋಂಕಿನ ಕಾರಣದಿಂದಾಗಿ ಬಳಕೆಯಾಗದಿರುವುದರಿಂದ ಪುನಃ ವ್ಯವಸ್ಥಿತವಾಗಿ ನಿರ್ವಹಿಸಬೇಕಾದ ಅಗತ್ಯವಿದೆ. ಅಲ್ಲದೇ ಕ್ರೀಡಾಶಾಲೆಗಳಲ್ಲಿನ ಕ್ರೀಡಾಳುಗಳಿಗೆ ಆರೋಗ್ಯ, ಸ್ವಚ್ಛತೆಯ ಜೊತೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಗುಣಮಟ್ಟದ ಪೌಷ್ಠಿಕ ಆಹಾರ, ವಸತಿ ಮತ್ತಿತರ ಸೌಲಭ್ಯ ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ದೇಶದ ಕ್ರೀಡಾಪಟುಗಳ ಸಾಧನೆ ತೃಪ್ತಿ ತಂದಿದೆ
ಇತ್ತೀಚೆಗೆ ನಡೆದ ಓಲಂಪಿಕ್ಸ್ ಕ್ರೀಡೆಯಲ್ಲಿ ದೇಶದ ಕ್ರೀಡಾಪಟುಗಳ ಸಾಧನೆ ತೃಪ್ತಿಕರವಾಗಿದೆ. ಆದಾಗ್ಯೂ ಕ್ರೀಡಾಪಟುಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳಿಗೆ ಸರ್ಕಾರದ ವತಿಯಿಂದಲೇ ಅಗತ್ಯ ಸಹಕಾರ ನೀಡಲಾಗುವುದಲ್ಲದೇ ದಾನಿಗಳು ಹಾಗೂ ಸರ್ಕಾರದ ಇತರೆ ಅನುದಾನ ಪಡೆದು ಕ್ರಮ ಕೈಗೊಳ್ಳಲಾಗುವುದು.
ಜಿಂದಾಲ್‌ನಂತಹ ಕಂಪನಿಗಳು ಸಹಕಾರ ನೀಡುವ ಬಗ್ಗೆ ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಇನ್ನಷ್ಟು ಮಂದಿಯನ್ನು ಕಳಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವಲ್ಲಿ ಕೋಚ್‌ಗಳ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವ ನಾರಾಯಣಗೌಡ ಹೇಳಿದರು.
ರಾಜ್ಯದಿಂದ 30 ಕೋಟಿ ಅನುದಾನ ಮಂಜೂರು
6,000 - 7,000 ಕ್ರೀಡಾಪಟುಗಳು ಭಾಗವಹಿಸುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಸೌಲಭ್ಯವನ್ನು ಬಳಸಿಕೊಂಡು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ.
ಜಿಲ್ಲೆಗೆ 73 ಕೋಟಿ ಹಾಗೂ ಮಂಡ್ಯ ಜಿಲ್ಲೆಗೆ 70 ಕೋಟಿ ಅನುದಾನ ಖೇಲೋ ಇಂಡಿಯಾ ಯೋಜನೆಯಡಿ ಮಂಜೂರಾಗಿದೆ. ರಾಜ್ಯದಿಂದ 30 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ ಸಿಇಒ ಎಂ.ಎಲ್.ವೈಶಾಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೇಷ್ಮೇ ಬೆಳೆಗಾರರಿಗೆ ಸಹಾಯಧನದ ಚೆಕ್ ಅನ್ನು ಸಚಿವರು ಫಲಾನುಭವಿಗಳಿಗೆ ವಿತರಿಸಿದರು.