ಶಿವಮೊಗ್ಗ : ವೀರ ಸಾವರ್ಕರ್ ಅವರ ಹೆಸರನ್ನು ನಾಲಿಗೆ ಮೇಲೆ ತರಲೂ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಿದ್ದರಾಮಯ್ಯ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ. ಬ್ರಿಟಿಷರು ಸಾಗರದಾಚೆಗಿನ ಜೈಲಿನಲ್ಲಿ ಸಾವರ್ಕರ್ ಅವರನ್ನು ಇಟ್ಟಿದ್ದರು. ಸಿದ್ದರಾಮಯ್ಯ ಒಮ್ಮೆ ಹೋಗಿ ಆ ಜೈಲನ್ನು ನೋಡಿಕೊಂಡು ಬರಲಿ. ಸಾವರ್ಕರ್ ಇದ್ದ ಜೈಲು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಕೊಟ್ಟ ಜಾಗ. ಆದರೆ, ಇಂದು ಬೇರೆ ಬೇರೆ ಕಾರಣಕ್ಕೆ ಕಾಂಗ್ರೆಸ್ಸಿಗರು ಜೈಲಿಗೆ ಹೋಗ್ತಿದ್ದಾರೆ ಎಂದು ಗೇಲಿ ಮಾಡಿದರು.
ಗಾಂಧೀಜಿ ಶಾಂತಿಯುತವಾಗಿ ಹೋರಾಟ ಮಾಡಿದ್ರೆ, ಸಾವರ್ಕರ್, ಭಗತ್, ಚಂದ್ರಶೇಖರ್ ಕ್ರಾಂತಿ ಮಾರ್ಗದಲ್ಲಿ ಹೋರಾಟ ಮಾಡಿದರು. ಇತಿಹಾಸ ಗೊತ್ತಿರದ ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಭಾರತ ರತ್ನ ಯಾರಿಗೆ ಕೊಡ್ಬೇಕು ಎಂದು ಯೋಚನೆ ಮಾಡುತ್ತದೆ. ಇಂದಲ್ಲಾ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದರು.