ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 87 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಒದಗಿಸಲು ಯಾವುದೇ ಅವಕಾಶ ಇರುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶಾಲೆಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ. ಇದೇ ರೀತಿ ರಾಜ್ಯದ ಎಲ್ಲಾ ನಗರ ವ್ಯಾಪ್ತಿಯ ಶಾಲೆಗಳ ದುರಸ್ತಿಗೆ ಅನುದಾನ ಒದಗಿಸುವ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲು ಮನವಿ ಮಾಡುತ್ತೇನೆ ಎಂದರು.
ದುರಸ್ತಿ ಕಾಮಗಾರಿಗಳಿಗೆ ನೀಡಿರುವ ಅನುದಾನದ ಸಮರ್ಪಕ ಬಳಕೆಯಾಗಬೇಕಾದರೆ ಶಿಕ್ಷಕರು, ಪಾಲಕರು ಮಾತ್ರವಲ್ಲದೆ ಸಾರ್ವಜನಿಕರ ಜವಾಬ್ದಾರಿಯೂ ಇದೆ. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಖಾತ್ರಿಪಡಿಸಬೇಕು. ನಮ್ಮ ಸರ್ಕಾರಿ ಶಾಲೆಗಳು ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.