ಶಿವಮೊಗ್ಗ : ಕೊರೊನಾದಿಂದ ಜನ ಒಬ್ಬರನ್ನೂಬ್ಬರು ನಂಬದಂತಹ ಸ್ಥಿತಿ ತಲುಪಿದೆ. ಅದರಲ್ಲೂ ವೈದ್ಯಕೀಯ ಕ್ಷೇತ್ರ ಸಹ ಅಲುಗಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ವಿಭಾಗ ತೆರೆಯಲು ಹೆದರುತ್ತಿವೆ. ಕೋವಿಡ್‌ನಲ್ಲಿ ಹಣವೇನೂ ಗಳಿಸಬಹುದು. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯವನ್ನು ಸಹ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೊರೊನಾ ಶಂಕಿತರನ್ನು ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯವರು ತಪಾಸಣೆ ನಡೆಸುತ್ತಿಲ್ಲ.
ಹೊರ ರೋಗಿಯಾಗಿದ್ರೆ, ಅವರಿಗೆ ಕೊರೊನಾ ವರದಿ ತರಲು ಸೂಚಿಸಲಾಗುತ್ತದೆ. ಒಳರೋಗಿಯಾಗಿದ್ರೆ, ಅಂತಹವರ ಸ್ವ್ಯಾಬ್‌ನ ಸಂಬಂಧಿಸಿದ ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಶಂಕಿತರಿದ್ದರೆ ಅವರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿಕೊಂಡು ನೆಗಟಿವ್ ವರದಿ ತಂದ ನಂತರ ತಪಾಸಣೆ ನಡೆಸಲಾಗುತ್ತದೆ.
ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆ ಸೇರಿ ನಾಲ್ಕು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಕೊರೊನಾ ಚಿಕಿತ್ಸೆಗೆ ಅವಕಾಶ ನೀಡಿರುವುದರಿಂದ ಕೊರೊನಾ ಶಂಕಿತರ ಸ್ಕ್ಯಾನ್ ಸೇರಿದಂತೆ ಯಾವುದೇ ಪರೀಕ್ಷೆಯನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಮಾಡುತ್ತಿಲ್ಲ.
ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಶ್ವಾಸಕೋಶದ ಎಕ್ಸ್- ರೇ ಇಲ್ಲ : ಜಿಲ್ಲೆಯಲ್ಲಿ ಆ್ಯಂಟಿಜೆನ್ ಕಿಟ್‌ನಲ್ಲಿ ನೆಗಟಿವ್ ಬಂದು ಹೆಚ್ಚಿನ ಮಾಹಿತಿಗಾಗಿ ವೈದ್ಯರು ಶ್ವಾಸಕೋಶದ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಕಳುಹಿಸಿದ್ರೆ, ಜಿಲ್ಲೆಯ ಯಾವುದೇ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಪರೀಕ್ಷೆ ನಡೆಸುತ್ತಿಲ್ಲ. ಕಾರಣ ವೈದ್ಯರ ಶಿಫಾರಸ್ಸಿಗೆ ಮಣಿದು ಸ್ಕ್ಯಾನಿಂಗ್ ನಡೆಸಿದ್ರೆ, ಮುಂದೆ ಪಾಸಿಟಿವ್ ಬಂದರೆ, ಸೆಂಟರ್‌ನ ಸೀಲ್‌ಡೌನ್ ಮಾಡಬೇಕಾಗುತ್ತದೆ. ಇಲ್ಲ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಅಲ್ಲದೆ ಮುಂದೆ ಭಯದಿಂದ ಜನ ಸ್ಕ್ಯಾನಿಂಗ್ ಸೆಂಟರ್‌ಗೆ ಯಾರೂ ಬಾರದೆ ಬೇರೆ ಕಡೆ ಹೋಗುವ ಭಯದಿಂದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಶ್ವಾಸಕೋಶದ ಸ್ಕ್ಯಾನಿಂಗ್ ನಡೆಸುತ್ತಿಲ್ಲ.
ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಸೇರಿ ಮ್ಯಾಕ್ಸ್,ಮೆಟ್ರೋ, ನಂಜಪ್ಪ ಹಾಗೂ ಸಹ್ಯಾದ್ರಿ ನಾರಾಯಣ ಹೃದಯಾಲಯದಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಸೌಕರ್ಯ ಇರುವುದರಿಂದ, ಖಾಸಗಿ ಆಸ್ಪತ್ರೆ ಹೊರಭಾಗದ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಸ್ಕ್ಯಾನಿಂಗ್‌ಗೆ ಕಳುಹಿಸುವುದಿಲ್ಲ. ಶ್ವಾಸಕೋಶದ ಸ್ಕ್ಯಾನಿಂಗ್ ಬಿಟ್ಟು ಉಳಿದ ಸ್ಕ್ಯಾನಿಂಗ್ ನಡೆಸುತ್ತೇವೆ ಎನ್ನುತ್ತಾರೆ ಶಿವಮೊಗ್ಗದ ಮಲ್ನಾಡ್ ಸಿಟಿ ಸ್ಕ್ಯಾನಿಂಗ್ ಸೆಂಟರ್‌ನ ಮುಖ್ಯಸ್ಥ ಡಾ.ವಿಕ್ರಮ್ ಅವರು.
ಜಿಲ್ಲಾಡಳಿತ ಕೋವಿಡ್ ಸೋಂಕಿತರನ್ನು ಮೊದಲು ಗುರುತಿಸಿ, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಡುತ್ತಿದೆ. ಇಲ್ಲಿಯೇ ಎಲ್ಲಾ ರೀತಿಯ ಸೌಲಭ್ಯ ಸಿಗುವ ಕಾರಣ ಯಾವುದಕ್ಕೂ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಲಾಗುವುದಿಲ್ಲ. ಇದರಿಂದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಸಹ ಶ್ವಾಸಕೋಶದ ಸ್ಕ್ಯಾನಿಂಗ್ ನಡೆಸುವುದಿಲ್ಲ. ನಮ್ಮ ಮೊದಲ ಆದ್ಯತೆ ಮೆಗ್ಗಾನ್ ಆಸ್ಪತ್ರೆ ಆಗಿದೆ. ಇದರಿಂದ ಕೊರೊನಾ ಶಂಕಿತರು ಅಂತಾ ತಿಳಿಯುತ್ತಿದ್ದಂತೆಯೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುವುದು. ಅಲ್ಲಿಯೇ ಎಲ್ಲಾ ಸೌಲಭ್ಯಗಳು ಇವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಅವರು.