ಶಿವಮೊಗ್ಗ: ಮುಕ್ತವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಒಂಭತ್ತು ಅಂಗಡಿಗಳ ಮೇಲೆ ಅಪರ ಜಿಲ್ಲಾಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು.
ಶಿವಮೊಗ್ಗದ ಈದ್ಗಾ ಮೈದಾನದ ಬಳಿ ಇರುವ 9 ಅಂಗಡಿಗಳ ಮೇಲೆ ಅಪರ ಜಿಲ್ಲಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಿತು. ತಂಬಾಕನ್ನು ಸಾರ್ವಜನಿಕವಾಗಿ ಮಾರಾಟ ಮಾಡಬಾರದು, ಮುಖ್ಯವಾಗಿ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ವಸ್ತುಗಳನ್ನು ಬಿಡಿಯಾಗಿ ಮಾರಾಟ ಮಾಡುವಂತಿಲ್ಲ. ಬದಲಾಗಿ ಪ್ಯಾಕೆಟ್ಗಳ ಮೂಲಕವೇ ಮಾರಾಟ ಮಾಡಬೇಕು. ಅದರಲ್ಲೂ ಶಾಲಾ- ಕಾಲೇಜುಗಳಿಂದ 100 ಮೀಟರ್ ಒಳಗಡೆ ಯಾರೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲೇಬಾರದು ಎಂದು ತಿಳಿಸಿದ್ರು.
ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನತೆಗೆ ಅರಿವು ಮೂಡಿಸುವ ಸಲುವಾಗಿ ಅಪರ ಜಿಲ್ಲಾಧಿಕಾರಿ ಅನುರಾಧ, ತಂಬಾಕು ನಿಯಂತ್ರಣಾಧಿಕಾರಿಗಳು, ಪೊಲೀಸ್, ಎನ್ಜಿಒ ಹಾಗೂ ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಒಟ್ಟು 9 ಅಂಗಡಿಗಳ ಮೇಲೆ ದಾಳಿ ನಡೆಸಿ, ಸುಮಾರು 900 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಇದೇ ವೇಳೆ ತಂಬಾಕು ಉತ್ಪನ್ನ ಮಾರಾಟ ಮಾಡಿದವರಿಗೆ 6 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ.ವರೆಗೂ ದಂಡ ಹಾಕುವ ಅವಕಾಶ ಕೋರ್ಟ್ಗೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದರು.