ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಗ್ರಾಹಕರ ವೇದಿಕೆಯು ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ಕೆಲವು ಮುಖ್ಯ ಬದಲಾವಣೆಯನ್ನು ಮಾಡಿದ್ದು, ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗವೆಂದು ಮರು ಹೆಸರಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಹೀರಾತು ಹಳೆ ಕಾಯ್ದೆ ಆಡಿಯೋ, ವಿಶುವಲ್ ಪಬ್ಲಿಸಿಟಿ, ರೆಪ್ರೆಸೆಂಟೇಶನ್, ಲೈಟ್, ಗ್ಯಾಸ್, ಪ್ರಿಂಟ್‍ಗಳ ಜಾಹೀರಾತುಗಳ ಜೊತೆಗೆ ಎಲೆಕ್ಟ್ರಾನಿಕ್ ಮೀಡಿಯಾ, ಇಂಟರ್ನೆಟ್, ವೆಬ್‍ಸೈಟ್ ಜಾಹೀರಾತುಗಳನ್ನು ಸೇರಿಸಲಾಗಿದೆ. ವಸ್ತುಗಳನ್ನು ಕೊಂಡುಕೊಳ್ಳುವುದರ ಕಾಯ್ದೆ ಜೊತೆಗೆ ಆನ್‍ಲೈನ್ ಮತ್ತು ಎಲೆಕ್ಟ್ರಾನಿಕ್ ಅಥವಾ ಟೆಲಿ ಶಾಪಿಂಗ್ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಕೊಂಡುಕೊಳ್ಳುವುದರ ಮೊಕದ್ದಮೆಗಳನ್ನು ಸೇರಿಸಲಾಗಿದೆ. ಹಾಗೆಯೇ ಇ-ಕಾಮರ್ಸ್ ವಸ್ತುಗಳನ್ನು ಕೊಂಡುಕೊಳ್ಳುವುದು ಮತ್ತು ಮಾರುವಿಕೆ ವ್ಯಾಜ್ಯಗಳ ಜೊತೆ ಡಿಜಿಟಲ್ ಪ್ರಾಡಕ್ಟ್ ಅಥವಾ ಎಲೆಕ್ಟ್ರಾನಿಕ್ ನೆಟ್‍ವರ್ಕ್ ವ್ಯಾಜ್ಯಗಳನ್ನು ಸಹ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‍ಗಳಲ್ಲಿ ಇನ್‍ವೆಸ್ಟಿಗೇಷನ್ ವಿಂಗ್‍ಗಳನ್ನು ಹೊಸದಾಗಿ ಜಾರಿಗೆ ತರಲಾಗಿದೆ. ಸೆಂಟ್ರಲ್ ಕನ್ಸೂಮರ್ ಕೌನ್ಸಿಲ್‍ಗಳು ಇನ್‍ವೆಸ್ಟಿಗೇಷನ್ ಮಾಡಿಕೊಟ್ಟಂತಹ ವರದಿ ಆಧಾರದ ಮೇಲೆ ಯಾವುದೇ ಸುಳ್ಳು ಜಾಹಿರಾತು ಎಂದು ತಿಳಿದು ಬಂದಲ್ಲಿ, ಅವರ ವಿರುದ್ಧ 10 ಲಕ್ಷದವರೆಗೆ ದಂಡ ವಿಧಿಸಲು ಸೆಂಟ್ರಲ್ ಅಥಾರಿಟಿಗೆ ಅಧಿಕಾರ ನೀಡಲಾಗಿದೆ. ಸುಳ್ಳು ಜಾಹೀರಾತು ಪುನಃ ಮರುಕಳಿಸಿದರೆ ಅದಕ್ಕೆ 50 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ. ಹಾಗೂ ಜಾಹಿರಾತಿನ ವಸ್ತುಗಳ ಬಗ್ಗೆ 1 ವರ್ಷದವರೆಗೆ ಯಾವುದೇ ಜಾಹೀರಾತು ನೀಡದಂತೆ ಪ್ರತಿಬಂಧಿಸುವ ಅಧಿಕಾರ ಸಹ ನೀಡಲಾಗಿದೆ. ಇದನ್ನು ಮೀರಿ ಜಾಹೀರಾತು ನೀಡಿದಲ್ಲಿ ಆ ಒಂದು ವರ್ಷದಿಂದ ಮೂರು ವರ್ಷದವರೆಗೆ ವಿಸ್ತರಿಸಲು ಹಾಗೂ ಯಾವುದೇ ವ್ಯಕ್ತಿ ಸುಳ್ಳು ಜಾಹೀರಾತು ನೀಡಿದಲ್ಲಿ ಅವನಿಗೆ 10 ಲಕ್ಷದವರೆಗೆ ದಂಡ ವಿಧಿಸಲು ಅಧಿಕಾರವಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆಯೋಗವು ಗ್ರಾಹಕರಿಗೆ ಪರಿಹಾರ ಕೊಡಿಸುವ ಹಣದ ವ್ಯಾಪ್ತಿಯು 20 ಲಕ್ಷದಿಂದ 1 ಕೋಟಿಗೆ ವಿಸ್ತರಿಸಲಾಗಿದ್ದು, ರಾಜ್ಯ ಆಯೋಗಕ್ಕೆ ಒಂದು ಕೋಟಿಯಿಂದ ಹತ್ತು ಕೋಟಿಗೆ ಹಾಗೂ ರಾಷ್ಟ್ರೀಯ ಆಯೋಗಕ್ಕೆ 10 ಕೋಟಿಗಿಂತ ಹೆಚ್ಚಿರಬೇಕೆಂದು ಅವರು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ರಾಜ್ಯ ಆಯೋಗಕ್ಕೆ ಮಧ್ಯಸ್ಥಿಕೆ ಕೇಂದ್ರ (ಮಿಡಿಯೇಷನ್ ಸೆಂಟರ್)ನ್ನು ರಚಿಸಲು ಅಧಿಕಾರ ವಹಿಸಲಾಗಿದ್ದು, ಮೀಡಿಯೇಷನ್ ಮುಂದೆ ರಾಜಿಯಾದ ಪ್ರಕರಣಗಳ ಬಗ್ಗೆ ಯಾವುದೇ ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಯಾವುದೇ ಗ್ರಾಹಕ ತಾನು ಕೊಂಡ ವಸ್ತುಗಳನ್ನು ದುರುಪಯೋಗ ಮಾಡಿಕೊಂಡಲ್ಲಿ, ಬದಲಾವಣೆ ಅಥವಾ ರಿಪೇರಿ ಮಾಡಿದಲ್ಲಿ ಅವನು ಪ್ರಾಡಕ್ಟ್ ಲೈಯಾಬಿಲಿಟಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಯಾವುದೇ ತಯಾರಕರು ಅಥವಾ ಸರ್ವಿಸ್ ಪ್ರೊವೈಡರ್ ಸುಳ್ಳು ಜಾಹೀರಾತು ನೀಡಿದಲ್ಲಿ ಎರಡು ವರ್ಷಗಳ ಶಿಕ್ಷೆಯ ಜೊತೆ 10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಮತ್ತು ನಂತರವೂ ಮುಂದುವರಿಸಿದ್ದಲ್ಲಿ 5 ವರ್ಷದ ಶಿಕ್ಷೆಯ ಜೊತೆಗೆ 50 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.