ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೂ ದಿ. ನಟ ಪುನೀತ್ ರಾಜ್ ಕುಮಾರ್ ಅವರಿಗೂ ಉತ್ತಮ ನಂಟಿತ್ತು. ಪುನೀತ್ ರಾಜ್ಕುಮಾರ್ ಶಿವಮೊಗ್ಗಕ್ಕೆ ತಮ್ಮ ಸಣ್ಣ ವಯಸ್ಸಿನಲ್ಲಿಯೇ ತಮ್ಮ ತಂದೆ ಡಾ. ರಾಜ್ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಜೊತೆ ಆಗಮಿಸಿದ್ದರು. ರಾಜ್ ಅಭಿನಯದ ಭಾಗ್ಯವಂತರು ಚಿತ್ರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ನಂತರ ಶಿವಮೊಗ್ಗದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಸಹೋದರರ ಜೊತೆ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಆಗಮಿಸಿದ್ದ ಪುನೀತ್ ರಾಜ್ ಕುಮಾರ್, ಪ್ರಶಸ್ತಿ ಸ್ವೀಕರಿಸಿ ಅಂದು ಉಳಿದುಕೊಂಡು ಮರುದಿನ ಬೆಂಗಳೂರಿಗೆ ಪಯಾಣ ಮಾಡಿದ್ದರು.
ಇನ್ನೂ ತಮ್ಮ ಸಂಬಂಧಿಕರ ಮದುವೆಗೆಂದು ಶಿವಮೊಗ್ಗದ ಸರ್ಜಿ ಕನ್ವೆಂಷನ್ ಹಾಲ್ಗೆ ಆಗಮಿಸಿದ್ದರು. ತೀರ ಇತ್ತಿಚೇಗೆ ಅಂದ್ರೆ, ಸೆಪ್ಟಂಬರ್ 1 ರಂದು ಶಿವಮೊಗ್ಗದ ಸಕ್ರೆಬೈಲಿಗೆ ಆಗಮಿಸಿದ್ದರು. ಸಕ್ರೆಬೈಲಿನ ಆನೆಗಳ ಕ್ರಾಲ್ ಬಳಿಯ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಲು ಆಗಮಿಸಿದ್ದರು. ಅಭಿಮಾನಿಗಳನ್ನು ತುಂಬ ಇಷ್ಟ ಪಡುತ್ತಿದ್ದ ಪುನೀತ್ ರಾಜ್ ಕುಮಾರ್ ಅಂದು ಶೂಟಿಂಗ್ ನಿಲ್ಲಿಸಿ ಅಭಿಮಾನಿಗಳೊಂದಿಗೆ ಮಾತನಾಡಿಸಿ ವಾಪಸ್ ಆಗಿದ್ದರು.
ಇನ್ನೂ ಚಲನಚಿತ್ರ ಪ್ರಶಸ್ತಿ ಸ್ವೀಕಾರಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಶಿವಮೊಗ್ಗದ ಜ್ಯೂಯಲ್ ರಾಕ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ, ಹೋಟೆಲ್ನ ವಿನ್ಯಾಸ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರಂತೆ ಹಾಗೂ ಹೋಟೆಲ್ ಸಿಬ್ಬಂದಿ ಜೊತೆ ಅತ್ಯಂತ ಆತ್ಮೀಯವಾಗಿ ವರ್ತಿಸಿದ್ದರು. ಅಭಿಮಾನಿಗಳನ್ನು ನೋಡಲು ಅವರು ಸಹ ಕಾತುರರಾಗಿದ್ದರು. ಅಭಿಮಾನಿಗಳ ಜೊತೆ ಯಾವುದೇ ಹಮ್ಮು-ಬಿಮ್ಮು ತೋರದೇ ಬೆರೆಯುವುದನ್ನು ಕಂಡು ನಮಗೆ ಸಂತಸವಾಯಿತು ಎನ್ನುತ್ತಾರೆ ಹೋಟೆಲ್ ಮ್ಯಾನೇಜರ್ ವಿಶ್ವನಾಥ್.
ಇದನ್ನೂ ಓದಿ: ಇಂದು ರಾತ್ರಿ 11:30ಕ್ಕೆ ಪುನೀತ್ ಮಗಳು ಧೃತಿ ಆಗಮನ.. ಭಾನುವಾರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿ
ನಟ ಪುನೀತ್ ರಾಜ್ ಕುಮಾರ್ ಇಂದು ನಮ್ಮೊಂದಿಗಿರದಿದ್ದರೂ ಅವರ ನೆನಪು ಮಾತ್ರ ಸದಾ ಜೀವಂತ..