ಶಿವಮೊಗ್ಗ: ಹಿಂದೂಗಳ ತಾಳ್ಮೆಗೂ ಒಂದು ಮಿತಿ ಇದೆ. ಇನ್ನೂ ಹೆಚ್ಚು ಪರೀಕ್ಷೆ ಮಾಡಬೇಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
"ಈ ಘಟನೆಯಲ್ಲಿ ಆರೋಪಿಗಳೇ ತಪ್ಪೊಪ್ಪಿಕೊಂಡ ಮೇಲೆ ವಿಚಾರಣೆ ಮಾಡುವ ಅಗತ್ಯವೇನಿದೆ?. ಪ್ರಧಾನಿ ಮೋದಿಯವರಿಗೆ ನಾನು ಮನವಿ ಮಾಡುತ್ತೇನೆ. ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೂಪದಲ್ಲಿ ಕೊಲೆ ಮಾಡಲಾಗುತ್ತಿದೆ. ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು. ಸಂವಿಧಾನಬದ್ಧವಾಗಿ ಗಲ್ಲುಶಿಕ್ಷೆ ಅಥವಾ ಗುಂಡಿಟ್ಟು ಕೊಲ್ಲುವ ಶಿಕ್ಷೆ ನೀಡಬೇಕು. ಕೊಲೆ ಮಾಡಿದ್ದನ್ನು ಅವರೇ ವಿಡಿಯೋ ಮೂಲಕ ಒಪ್ಪಿಕೊಂಡಿದ್ದಾರೆ" ಎಂದು ಹೇಳಿದರು.
ದೇಶದಲ್ಲಿ ಮದರಸಾಗಳನ್ನು ಬ್ಯಾನ್ ಮಾಡಬೇಕು: ಪ್ರತಿಭಟನೆ ಮುಗಿದ ನಂತರ ಈ ಸಂಬಂಧ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಈಶ್ವರಪ್ಪ, "ದೇಶದಲ್ಲಿ ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಹಾಗಾಗಿ ಮದರಸಾಗಳನ್ನು ಬ್ಯಾನ್ ಮಾಡಬೇಕು" ಎಂದು ಒತ್ತಾಯಿಸಿದರು.
"ರಾಜಸ್ಥಾನದಲ್ಲಿ ಕನ್ನಯ್ಯ ಅವರ ಕಗ್ಗೊಲೆ ಕೇವಲ ಒಬ್ಬ ವ್ಯಕ್ತಿಯನ್ನು ಇಬ್ಬರು ಕೊಂದರು ಎಂಬುವುದಕ್ಕೆ ಮಾತ್ರ ಸೀಮಿತವಾಗಲ್ಲ. ಬದಲಾಗಿ ಇಡೀ ಹಿಂದು ಸಮಾಜಕ್ಕೆ ಇಡೀ ದೇಶಕ್ಕೆ ಇದು ಸವಾಲಾಗಿದೆ. ನಮ್ಮ ಶ್ರದ್ಧಾಕೇಂದ್ರಗಳು ನೂರಾರು ವರ್ಷದಿಂದ ಅಪವಿತ್ರಗೊಂಡಿವೆ. ಅಯೋಧ್ಯೆಯಲ್ಲಿದ್ದ ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಿದ್ದರು. ಇದು ಗೊತ್ತಿದ್ದರೂ ಕೂಡ ಅಪಮಾನವನ್ನು ನೂರಾರು ವರ್ಷ ಸಹಿಸಿಕೊಂಡು ಬಂದಿದ್ದೆವು. ಇಂದಿಗೂ ಕಾಶಿಯಲ್ಲಿ ವಿಶ್ವನಾಥನ ಲಿಂಗ ನೀರಿನಲ್ಲಿತ್ತು. ಆ ನೀರಿನಲ್ಲಿ ಮುಸಲ್ಮಾನರು ಕಾಲು ತೊಳೆದುಕೊಂಡು ಹೋಗಿ ನಮಾಜು ಮಾಡುತ್ತಿದ್ದರು. ಮಥುರಾದಲ್ಲಿ ಶ್ರೀಕೃಷ್ಣನ ಜನ್ಮ ಸ್ಥಳದ ದೇವಾಲಯ ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೆ" ಎಂದು ಹರಿಹಾಯ್ದರು.
"ನೂಪುರ್ ಶರ್ಮಾ ಅವರು ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಂ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಆದರೆ, ಇದೀಗ ರಾಜಸ್ಥಾನದಲ್ಲಿ ಬಡ ಟೈಲರ್ ಕೊಲೆಯಾಗಿದ್ದಾನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ. ಇದು ಹಿಂದು ಸಮುದಾಯಕ್ಕೆ ಆದ ಅಪಮಾನ ಹಾಗೂ ಸವಾಲು" ಎಂದರು.
ಇಷ್ಟೆಲ್ಲಾ ಅವಮಾನ, ಕೊಲೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಆಗಿದ್ದು ಆಯಿತು ಎನ್ನುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಾಯಿ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉದಯಪುರ ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡ: ಸಂಸದ ಪ್ರತಾಪ್ ಸಿಂಹ ಕಿಡಿ