ಶಿವಮೊಗ್ಗ: ಸಿಮ್ಸ್ ಬೈಲಾ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧವಾಗಿ ಸಿಮ್ಸ್ ವೈದ್ಯಕೀಯ ಕಾಲೇಜಿಗೆ ನೇಮಿಸಿರುವ ನಿರ್ದೇಶಕರನ್ನು ಕೂಡಲೇ ಬಿಡುಗಡೆಗೊಳಿಸಿ, ಆ ಹುದ್ದೆಗೆ ಅರ್ಹರನ್ನು ನೇಮಕ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮೃತರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಹೀಗಾಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ, ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ನಿಯಂತ್ರಿಸಬೇಕು. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೇವಲ ಏಳು ಆಕ್ಸಿಜನ್ ಯಂತ್ರಗಳಿವೆ. ಹೀಗಾಗಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಯಂತ್ರಗಳನ್ನು ತಲಾ 50ರಂತೆ ಕೂಡಲೇ ಖರೀದಿಸಬೇಕು. ಎಲ್ಲಾ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಕೊರೊನಾ ಕೇರ್ ಸೆಂಟರ್ ಆರಂಭಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಡಬೇಕು ಹಾಗೂ ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗದಂತೆ ಅವರ ಆತ್ಮಸ್ಥೆರ್ಯ ತುಂಬಬೇಕು.
ಇನ್ನು, ಸಿಮ್ಸ್ ಬೈಲಾದ ವಿರುದ್ಧವಾಗಿ ಹಾಗೂ ರಾಜ್ಯ ಉಚ್ಛನ್ಯಾಯಾಲಯದ ಆದೇಶದ ವಿರುದ್ಧವಾಗಿ 68 ವರ್ಷ ಆಗಿರುವ ನಿರ್ದೇಶಕರನ್ನು ನೇಮಿಸಲಾಗಿದೆ. ಕೂಡಲೇ ಅವರನ್ನು ನಿರ್ದೇಶಕರ ಸ್ಥಾನದಿಂದ ಬಿಡುಗಡೆಗೊಳಿಸಿ, ಸಿಮ್ಸ್ ಬೈಲಾ ನಿಯಮಾನುಸಾರ ಅರ್ಹರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.