ಶಿವಮೊಗ್ಗ: ಮೊಬೈಲ್ ಕಳ್ಳತನವಾದರೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಇಲ್ಲಿ ಪೊಲೀಸರೇ ತಮ್ಮ ಮೊಬೈಲ್ಗಳನ್ನ ಕಳೆದುಕೊಂಡು ದೂರು ನೀಡಿದ್ದಾರೆ. ಅದೂ ಒಂದಲ್ಲ, ಎರಡಲ್ಲ. ಬರೋಬ್ಬರಿ 27 ಮೊಬೈಲ್ಗಳು ಕಳ್ಳತನವಾಗಿವೆ.
ಕಳೆದ ಸೆ. 12ರಂದು ನಡೆದ ನಗರದ ಹಿಂದೂ ಸಂಘಟನಾ ಮಹಾ ಮಂಡಳಿಯ ಗಣೇಶನ ನಿಮಜ್ಜನ ಮೆರವಣಿಗೆಗೆ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರು ಬಂದಿದ್ದರು. ಹೀಗೆ ಬಂದ ಪೊಲೀಸರಿಗೆ ವಿವಿಧ ಕಲ್ಯಾಣ ಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಒಂದು ಪೊಲೀಸರ ತಂಡಕ್ಕೆ ನಗರದ ಆರ್ಎಂಎಲ್ ನಗರದ ಕಲ್ಯಾಣ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಿಮಜ್ಜನ ಮುಗಿಸಿ ಬಂದು ಮಲಗಿದ್ದಾಗ ಕಳ್ಳರ ತಂಡ ಬಂದು ಬರೋಬ್ಬರಿ 27 ಮೊಬೈಲ್‌ಗಳನ್ನು ಎಗರಿಸಿಕೊಂಡು ಹೋಗಿದೆ.
ಬೆಳಗಿನ ಜಾವ 3ರಿಂದ 4 ಗಂಟೆ ಹೊತ್ತಿಗೆ ಪೊಲೀಸರು ಗಾಢ ನಿದ್ರೆಯಲ್ಲಿದ್ದಾಗ 27 ಮೊಬೈಲ್ ಹಾಗೂ ಒಟ್ಟು 25 ಸಾವಿರ ನಗದನ್ನು ಕಳ್ಳರು ಎಗರಿಸಿದ್ದು, ಈ ಬಗ್ಗೆ ಮೊಬೈಲ್‌ಗಳನ್ನು ಕಳೆದುಕೊಂಡ ಪೊಲೀಸರೇ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳ್ಳರು ಬೆಲೆಬಾಳುವ ಸ್ಮಾರ್ಟ್ ಫೋನ್‌ಗಳನ್ನು ಮಾತ್ರ ಕಳವು ಮಾಡಿದ್ದು, ಬೇಸಿಕ್ ಸೆಟ್‌ಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಮೊಬೈಲ್ ಕಳ್ಳರ ಜಾಲವೇ ಈ ಕಳ್ಳತನದ ಹಿಂದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ಮೊಬೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.