ಶಿವಮೊಗ್ಗ: ಹಲವು ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮೂಲವಾದ ಹೊಸಹಳ್ಳಿ ಬಳಿಯ ತುಂಗಾ ನದಿ ಚೆಕ್ ಡ್ಯಾಂಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಶಂಕೆ ಉಂಟಾಗಿದ್ದು, ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ನಡುವೆ ನದಿಯಲ್ಲಿದ್ದ ಹಲವು ಮೀನುಗಳ ಮಾರಣ ಹೋಮವೂ ನಡೆದಿದೆ.
ಈ ಚೆಕ್ ಡ್ಯಾಂನಲ್ಲಿ ಅಪರೂಪದ ಟಾರ್ ಮಹಶೀರ್ ತಳಿಯ ಕೆಲ ಮೀನುಗಳು ಸಾವನ್ನಪ್ಪಿರುವುದು, ವಿಷ ಬೆರೆಸಿರುವ ಶಂಕೆಯನ್ನು ಪುಷ್ಠೀಕರಿಸಿದೆ. ಹೊಸಹಳ್ಳಿ-ಮತ್ತೂರು ಅವಳಿ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಚೆಕ್ ಡ್ಯಾಂನಲ್ಲಿ ಈಗ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಅಲ್ಲಲ್ಲಿ ಕೆಲ ತಗ್ಗು ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನಿಂತಿರುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
![Poison to Tunga river](https://etvbharatimages.akamaized.net/etvbharat/prod-images/3119482_bdr.jpg)
ಮತ್ತೂರು ಜಾಕ್ವೆಲ್ನಿಂದ ಹೊನ್ನಾಪುರ, ಹೊಸಕೊಪ್ಪ, ಮಂಡನೇಕೊಪ್ಪ, ಲಕ್ಷ್ಮೀಪುರ, ಮತ್ತೂರು, ಹೊಸಳ್ಳಿ, ಸಿದ್ದರಹಳ್ಳಿ ಇನ್ನಿತರ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಜಾಕ್ವೆಲ್ನಿಂದ ಕುಡಿಯುವ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರ ಮಾಹಿತಿಯನ್ನಾಧರಿಸಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.
ನದಿಯಲ್ಲಿ ನೀರಿನ ಹರಿವು ಅತೀ ಕಡಿಮೆ ಇರುವುದರಿಂದ, ಹಸಿರು ಬಣ್ಣಕ್ಕೆ ತಿರುಗಿರುವ ಸಾಧ್ಯತೆಗಳಿವೆ. ಜತೆಗೆ ಈ ಭಾಗದಲ್ಲಿ ನದಿಯ ಎರಡೂ ಪಕ್ಕದಲ್ಲಿ ಅಡಿಕೆ ತೋಟಗಳಿರುವುದರಿಂದ ಅಲ್ಲಿಗೆ ಬಳಸುವ ಯಾವುದಾದರೂ ರಾಸಾಯನಿಕ ನದಿ ನೀರಿಗೆ ಸೇರಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ.
ಮತ್ತಷ್ಟು ದಟ್ಟವಾದ ವಿಷ ಬೆರಕೆ ಅನುಮಾನ..
ವಿಷ ಬೆರಕೆ ಅನುಮಾನ ಮತ್ತಷ್ಟು ದಟ್ಟವಾಗುತ್ತಿದೆ. ಶುಕ್ರವಾರವೂ ನೂರಾರು ಮೀನುಗಳು ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಆತಂಕ ಮುಂದುವರಿದೆ. ಈ ಹಿನ್ನೆಲೆಯಲ್ಲಿ ಮತ್ತೂರು ಮತ್ತು ಹೊಸಹಳ್ಳಿಯ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಎರಡು ಗ್ರಾಪಂ ವ್ಯಾಪ್ತಿಯ ಐದಾರು ಹಳ್ಳಿಗಳಿಗೆ ಪ್ರತಿದಿನ 35 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಹೊಸಹಳ್ಳಿ ವ್ಯಾಪ್ತಿಯ ಹೊಸಹಳ್ಳಿ, ಲಕ್ಷ್ಮೀಪುರ ತಾಂಡ, ಜಾಫರ್ ಕಾಲೋನಿ, ಹೊಸಕೊಪ್ಪ ಹಾಗೂ ಮತ್ತೂರು ಗ್ರಾಪಂ ವ್ಯಾಪ್ತಿಯ ಎರಡು ಗ್ರಾಮಗಳಿಗೆ ಏಳೆಂಟು ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ. ಉಳಿದಂತೆ 4 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರಿನ ಬಳಕೆ ಮಾಡುವಂತೆ ಗ್ರಾಪಂ ಮನವಿ ಮಾಡಿದೆ.
![Poison to Tunga river](https://etvbharatimages.akamaized.net/etvbharat/prod-images/3119482_bdrdf.jpg)
ಮೀನುಗಳು ಅಸ್ವಸ್ಥಗೊಂಡು ನೀರಿನಿಂದ ಹೊರ ಬರುತ್ತಿದ್ದು, ವಿಷ ಬೆರಕೆ ಮಾಡಿರುವ ಸಾಧ್ಯತೆ ಹೆಚ್ಚಿದೆ. ಸಣ್ಣ ಸ್ಪೋಟಕ ಸಿಡಿಸಿದ್ದರೆ, ಒಂದೇ ದಿನ ಮೀನುಗಳು ಸಾವನ್ನಪ್ಪುತ್ತಿದ್ದವು. ಆದರೆ, ಮೂರು ದಿನಗಳಿಂದಲೂ ಮೀನು ಸಾವನ್ನಪ್ಪುತ್ತಿವೆ. ಇದು ದುಷ್ಕರ್ಮಿಗಳು ನದಿಗೆ ವಿಷ ಬೆರೆಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.