ಶಿವಮೊಗ್ಗ: ಕೋವಿಡ್ ಕಾರಣದಿಂದಾಗಿ ಶಿವಮೊಗ್ಗ ಕಾರಾಗೃಹದ ಬಂಧಿಗಳನ್ನು ಅವರ ಸಂಬಂಧಿಕರು ನೇರವಾಗಿ ಭೇಟಿಯಾಗುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ವಿಡಿಯೋ ಕಾಲ್ ಮೂಲಕ ಸಂಬಂಧಿಕರೊಡನೆ ಮಾತನಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮುಖ್ಯ ಅಧೀಕ್ಷಕ ಡಾ. ರಂಗನಾಥ ಪಿ. ತಿಳಿಸಿದ್ದಾರೆ.
ಬಂಧಿಗಳೊಂದಿಗೆ ಅವರ ಸಂಬಂಧಿಕರು ಮನೆಯಲ್ಲಿಯೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಸೌಲಭ್ಯ ಇದಾಗಿದ್ದು, ವಿಡಿಯೋ ಕಾಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸುವಂತೆ ಅವರು ಕೋರಿದ್ದಾರೆ.
ಕಾಲ್ ಮಾಡುವುದು ಹೇಗೆ?
ಗೂಗಲ್‍ನಲ್ಲಿ ಎನ್‍ಪಿಇಪಿ ಎಂದು ಸರ್ಚ್ ಮಾಡಿ, ನಂತರ ನ್ಯೂ ವಿಸಿಟ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಬೇಕು. ಸಂದರ್ಶಕರು ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಕಡ್ಡಾಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಬಂಧಿಗಳ ಮಾಹಿತಿ ಭರ್ತಿ ಮಾಡಬೇಕು. ಬಳಿಕ ವಿಡಿಯೋ ಕಾನ್ಫರೆನ್ಸ್ ಆಯ್ಕೆ ಕ್ಲಿಕ್ ಮಾಡಬೇಕು. ಬಳಿಕ ಮೆಸೇಜ್ ಮತ್ತು ಇ-ಮೇಲ್‍ಗೆ ಬಂದಿರುವ ಒಟಿಪಿಯನ್ನು ಪೋರ್ಟಲ್‍ನಲ್ಲಿ ಹಾಕಿ ಓಕೆ ಮಾಡಬೇಕು. ಕಾರಾಗೃಹದ ಕಡೆಯಿಂದ ನಿಮ್ಮ ಸಂದರ್ಶನದ ಸಮಯವನ್ನು ನಿಗದಿಪಡಿಸಿದ ನಂತರ ನೀವು ನಮೂದಿಸಿದ ಇ-ಮೇಲ್‍ಗೆ ವಿಐಎಸ್ಆರ್ಎನ್ ನಂಬರ್, ಪಿನ್ ಮತ್ತು ಲಿಂಕ್ ಬರುತ್ತದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ವಿಐಎಸ್ಆರ್ಎನ್ ನಂಬರ್ ನೋಂದಾಯಿಸಿ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಬೇಕು. ಬಳಿಕ ಸ್ಕ್ರೀನ್‍ನಲ್ಲಿ ನಿಮ್ಮ ಇ-ಮೇಲ್‍ಗೆ ಕಳುಹಿಸಿರುವ ಪಿನ್ ಮತ್ತು ನಿಮ್ಮ ಮೊಬೈಲ್‍ಗೆ ಬರುವ ಒಟಿಪಿಯನ್ನು ಹಾಕಿ ಕ್ಲಿಕ್ ಮಾಡಿದರೆ ಜಿಟ್ಸಿ ಮುಖಾಂತರ ವಿಡಿಯೋ ಸಂದರ್ಶನಕ್ಕೆ ಹಾಜರಾಗಲು ಕೇಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳ ಜತೆ ಮಾತನಾಡಬಹುದು ಎಂದು ತಿಳಿದ್ದಾರೆ.
ಇನ್ನು, ಹೆಚ್ಚಿನ ಮಾಹಿತಿಗಾಗಿ 9480806469, 9480806467 ಸಂಪರ್ಕಿಸಬಹುದು ಎಂದು ಮುಖ್ಯ ಅಧೀಕ್ಷಕ ಡಾ. ರಂಗನಾಥ ಪಿ. ತಿಳಿಸಿದ್ದಾರೆ.