ಶಿವಮೊಗ್ಗ: ಕನ್ನಡ ನಮ್ಮ ಮಾತೃ ಭಾಷೆ ಹಾಗೂ ಹಿಂದಿ, ದೇಶವನ್ನು ಒಂದೂಗೂಡಿಸುವ ಭಾಷೆ. ಇದನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಹಿಂದಿಯನ್ನು ಕೇಂದ್ರ ಸರ್ಕಾರ ಯಾರ ಮೇಲೂ ಹೇರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಅನ್ನು ಒಪ್ಪುವ ನಾವು, ಹಿಂದಿಯನ್ನು ಯಾಕೆ ವಿರೋಧಿಸುತ್ತೇವೆಯೋ ಗೊತ್ತಿಲ್ಲ. ವಿಶ್ವದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರಿಗೆ ಗೌರವ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಮುಜುಗರ ಉಂಟು ಮಾಡುವ ರಾಜಕೀಯ ಕುತಂತ್ರ ಇದಾಗಿದೆ. ದೇಶಾದ್ಯಂತ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ರಾಜಕೀಯ ಕುತಂತ್ರವನ್ನು ನಾನು ಖಂಡಿಸುತ್ತೇನೆ ಎಂದರು.
ಸಿದ್ದರಾಮಯ್ಯ ಓರ್ವ ದಡ್ಡ:
ಸಿದ್ದರಾಮಯ್ಯನವರಿಗೆ ತಲೆ ಎಲ್ಲಿದೆ? ತಲೆ ಇದ್ದವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆದ ಈಶ್ವರಪ್ಪ, ಸರ್ದಾರ್ ವಲ್ಲಭ ಭಾಯ್ ಪಟೇಲ್ ನಂತರ ಉತ್ತಮ ಗೃಹಸಚಿವರೆಂದು ಅಮಿತ್ ಶಾ ಅವರನ್ನೇ ದೇಶದ ಜನರು ಒಪ್ಪಿರುವಾಗ ಈ ದಡ್ಡ ಸಿದ್ದರಾಮಯ್ಯ ಅವರು ಶಾ ದಡ್ಡ ಅಂತ ಹೇಳಿರುವುದು ಎಷ್ಟು ಸರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಜಲ ಪ್ರಳಯವೇ ಆಗಿದೆ. ಈಗಾಗಲೇ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತರಾಮನ್ ಹಾಗೂ ಎರಡು ತಂಡಗಳು ಬಂದು ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ವೀಕ್ಷಣೆ ಮಾಡಿ ಹೋಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.
ಬಿಜೆಪಿಗೆ ಜಿಟಿಡಿ ಮಾತ್ರವಲ್ಲ ಹೆಚ್ಡಿಡಿ, ಸಿದ್ದು ಬಂದ್ರೂ ಅಚ್ಚರಿ ಇಲ್ಲ:
ಮಾಜಿ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಜಿ.ಟಿ. ದೇವೇಗೌಡರಷ್ಟೇ ಅಲ್ಲ, ಹೆಚ್.ಡಿ. ದೇವೇಗೌಡ್ರು, ಸಿದ್ದರಾಮಯ್ಯನವರು ಬಿಜೆಪಿಗೆ ಬಂದ್ರು ಅಚ್ಚರಿ ಪಡಬೇಡಿ. ಮುಳುಗುವ ಪಕ್ಷದಲ್ಲಿ ಯಾರು ಇರುವುದಕ್ಕೆ ಇಷ್ಟಪಡ್ತಾರೆ. ಸಿದ್ದರಾಮಯ್ಯನವರು ಸೋತೂ ಬೇರೆ ಕಡೆಯಿಂದ ಗೆದ್ದು ಬಂದಿದ್ದಾರೆ. ಈಗ ಪ್ರತಿಪಕ್ಷದ ನಾಯಕನಾಗಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ನವರು ಮೊದಲು ತಮ್ಮ ಪ್ರತಿಪಕ್ಷದ ನಾಯಕ ಯಾರು ಅಂತ ಆಯ್ಕೆ ಮಾಡಿಕೊಳ್ಳಲಿ. ನಂತ್ರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.