ಶಿವಮೊಗ್ಗ: ತ್ಯಾಗರ್ತಿ ಸಾಗರ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದು. ಇದು ಸಾಗರ ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮಿ ದೂರದಲ್ಲಿದೆ. ಗ್ರಾಮದ ಮಧ್ಯ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ, ಇಲ್ಲಿನ ಜನರಿಗೆ ಸಂಜೆ ಮೇಲೆ ವೈದ್ಯಕೀಯ ಸೇವೆಯೇ ಲಭ್ಯವಾಗುತ್ತಿಲ್ಲ. ಆಸ್ಪತ್ರೆಗೆ ವೈದ್ಯರು, ನರ್ಸ್ಗಳು ಸೇರಿದಂತೆ ಅಗತ್ಯ ಎಲ್ಲ ಸಿಬ್ಬಂದಿ ಇದ್ದಾರೆ. ಆದರೂ ರಾತ್ರಿ ಆಗುತ್ತಲೇ ಇಲ್ಲಿನ ಸಿಬ್ಬಂದಿ ಆಸ್ಪತ್ರೆಗೆ ಬರುವುದಿಲ್ಲ. ಕಾರಣ, ವೈದ್ಯಕೀಯ ಸಿಬ್ಬಂದಿಗಳಿಗೆ ಇಲ್ಲಿ ವಸತಿ ಮಾಡಲು ವಸತಿ ಗೃಹಗಳೆ ಇಲ್ಲ.
ಇರುವ ವಸತಿ ಗೃಹಗಳು ಅನೈತಿಕ ಚಟುವಟಿಕೆಯ ತಾಣಗಳಾಗಿವೆ. ವಸತಿ ಗೃಹಗಳು ಎಲ್ಲ ಪಾಳು ಬಿದ್ದು, ವಾಸಯೋಗ್ಯಕ್ಕೆ ಬಾರದ ಸ್ಥಿತಿಗೆ ತಲುಪಿವೆ. ಇದನ್ನೇ ಬಳಸಿಕೊಳ್ಳುತ್ತಿರುವ ಕುಡುಕರು ತಮ್ಮ ನಿತ್ಯ ಕುಡಿಯುವ ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಇಲ್ಲಿ ಸಿಗುವ ಬಾಟಲಿಗಳೇ ಸಾಕ್ಷಿಯಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಒಳಗೆಯೇ ನಾಲ್ಕು ವಸತಿ ಗೃಹಗಳಿವೆ. ಆದರೆ ಈ ನಾಲ್ಕು ಮನೆಗಳು ಪಾಳು ಬಿದ್ದಿವೆ.
ಮನೆಗಳು ಯಾರಿಗೂ ವಾಸ ಮಾಡಲು ಯೋಗ್ಯವಿಲ್ಲದ ಪರಿಸ್ಥಿತಿಯಲ್ಲಿದೆ. ಎಲ್ಲವೂ ಹಳೇ ಕಾಲದ ಕೆಂಪಂಚಿನ ವಸತಿ ಗೃಹಗಳು. ವಸತಿ ಗೃಹದ ಛಾವಣಿಗಳು ಬಿದ್ದಿವೆ. ಹಂಚುಗಳು ಹಾರಿ ಹೋಗಿವೆ. ಇದರಿಂದ ಮಳೆಯ ನೀರು ಒಳಕ್ಕೆ ಹೋಗಿ, ಮನೆಯ ಗೋಡೆಗಳು ಬೀಳುವ ಸ್ಥಿತಿ ತಲುಪಿವೆ. ಇಂತಹ ಸ್ಥಿತಿ ತಲುಪಿದ ವಸತಿ ಗೃಹದಲ್ಲಿ ಯಾರು ತಾನೇ ವಾಸ ಮಾಡುತ್ತಾರೆ ಹೇಳಿ. ಇದರಿಂದ ಇಲ್ಲಿನ ಯಾವ ವೈದ್ಯಕೀಯ ಸಿಬ್ಬಂದಿಯೂ ಸಹ ತ್ಯಾಗರ್ತಿ ಗ್ರಾಮದಲ್ಲಿ ವಾಸ ಮಾಡದೇ, ಸಾಗರ ಪಟ್ಟಣದಿಂದ ಬರುತ್ತಿದ್ದಾರೆ.
ಇದರಿಂದಾಗಿ ರಾತ್ರಿ ಅಲ್ಲ ಸಂಜೆಯಿಂದಲೇ ತ್ಯಾಗರ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ರಾತ್ರಿಯ ವೈದ್ಯಕೀಯ ಸೇವೆಯೇ ಲಭ್ಯವಿಲ್ಲದಂತಾಗಿದೆ. ಇದರಿಂದ ರಾತ್ರಿ ವೇಳೆ ಅನಾರೋಗ್ಯಕ್ಕೆ ತುತ್ತಾದ ಹಾಗೂ ಹೆರಿಗೆಯಂತಹ ತುರ್ತು ಚಿಕಿತ್ಸೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ: ತ್ಯಾಗರ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಗಮನವನ್ನು ಸಹ ಹರಿಸಿಲ್ಲ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನ ರಾತ್ರಿ ವೇಳೆ ದುಬಾರಿ ಬೆಲೆ ತೆತ್ತು ಸಾಗರಕ್ಕೆ ಹೋಗುವ ಅನಿವಾರ್ಯ ಸ್ಥಿತಿಗೆ ಬಂದಿದ್ದಾರೆ. ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆಯೂ ಇಲ್ಲ. ಇದರಿಂದ ಜನ ರಾತ್ರಿ ವೇಳೆ ವಾಹನ ಸೌಲಭ್ಯವಿಲ್ಲದೇ, ಬಾಡಿಗೆ ವಾಹನದಲ್ಲಿ ಸಾಗರ ಅಥವಾ ಶಿವಮೊಗ್ಗ ತಲುಪಬೇಕಾಗುತ್ತದೆ.
ಆಸ್ಪತ್ರೆಯ ವಸತಿ ಗೃಹಗಳು ಪಾಳು ಬಿದ್ದರೂ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಇದುವರೆಗೂ ಆಸ್ಪತ್ರೆ ಸಿಬ್ಬಂದಿ ತಮ್ಮ ಪ್ರಸ್ತಾವನೆಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಕಳುಹಿಸಿಲ್ಲ. ಈ ಕುರಿತು ದೂರವಾಣಿಯಲ್ಲಿ ಈ ಟಿವಿ ಭಾರತದ ಜೊತೆ ಮಾತನಾಡಿದ ಸಾಗರ ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಅವರು ಅದಷ್ಟು ಬೇಗ ತ್ಯಾಗರ್ತಿ ಆಸ್ಪತ್ರೆಯಿಂದ ವಸತಿ ಗೃಹದ ಬಗ್ಗೆ ಒಂದು ಪ್ರಸ್ತಾವನೆ ಪಡೆದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಂಗಾರಪೇಟೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ನ್ಯಾಯಾಧೀಶರು ಗರಂ: ಸಿಬ್ಬಂದಿ, ವೈದ್ಯರಿಗೆ ತರಾಟೆ