ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಯಾಗಿ ಭಾಗವಹಿಸಲು ಸಮ್ಮತಿಸಿದ್ದಾರೆ.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ನೇತೃತ್ವದ ವಿಶ್ವವಿದ್ಯಾಲಯದ ನಿಯೋಗ ಇಂದು ಮಧ್ಯಾಹ್ನ ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಘಟಿಕೋತ್ಸವಕ್ಕೆ ಆಹ್ವಾನ ನೀಡಿತು. ಈ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರು ಸಮ್ಮತಿ ನೀಡಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದರು.
ಅಕ್ಟೋಬರ್ 15ರ ನಂತರ ಘಟಿಕೋತ್ಸವದಲ್ಲಿ ಭಾಗವಹಿಸುವುದಾಗಿ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದಾರೆ. ಕೋವಿಡ್ ನಿಬಂಧನೆಗಳು ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಘಟಿಕೋತ್ಸವ ಆಫ್‌ಲೈನ್ ಮಾದರಿಯಲ್ಲೇ ನಡೆಯಲಿದ್ದು, ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿರುವುದು ಸಂತಸದ ವಿಷಯ ಎಂದು ಕುಲಪತಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಎಸ್.ಎನ್.ಯೋಗೀಶ್, ಕುವೆಂಪು ವಿಶ್ವವಿದ್ಯಾಲಯದ ದೆಹಲಿ ಪ್ರತಿನಿಧಿ ರಾಜಶೇಖರ್ ಸವಣೂರು ಉಪಸ್ಥಿತರಿದ್ದರು.