ಶಿವಮೊಗ್ಗ: ಕೇಂದ್ರ ಸರ್ಕಾರದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಸುನ್ನಿ ಜಮೈತುಲ್ ಉಲ್ಮ ಕಮಿಟಿ ಹಾಗೂ ಸುನ್ನಿ ಜಾಮೀಯಾ ಮಸ್ಜಿದ್ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರು, ಪೌರತ್ವ ಕಾಯ್ದೆ ಮುಸ್ಲೀಂ ವಿರೋಧಿಯಾಗಿದೆ. ಜೊತೆಗೆ ಸಂವಿಧಾನ ವಿರೋಧಿಯೂ ಆಗಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಈ ಕಾಯ್ದೆ ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯ್ದೆ ನಮ್ಮ ದೇಶದ ನೈತಿಕ, ಆರ್ಥಿಕ, ಸಂವಿಧಾನಿಕ ಸ್ಫೂರ್ತಿ. ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ. ಭಾರತ ದೇಶದ ಪೌರತ್ವ ಪ್ರಧಾನದಲ್ಲಿ ಧಾರ್ಮಿಕ ನೆಲೆಯ ಆಧಾರದ ಮೇರೆಗೆ ತಾರತಮ್ಯ ಹಾಗೂ ನಮ್ಮ ಸಂವಿಧಾನದ ಪರಿಚ್ಛೇದ 14 ಮತ್ತು ಅಂತರಾಷ್ಟ್ರೀಯ ಹಕ್ಕುಗಳ ಮತ್ತು ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿರುವುದು ಸ್ಪಷ್ಟವಾಗಿದ್ದು, ರಾಜಕೀಯ ಲಾಭ ಪಡೆಯುವ ಹುನ್ನಾರವೂ ಇದರಲ್ಲಿ ಅಡಗಿರುವುದು ಸ್ಪಷ್ಟವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಈ ಕ್ರಮ ಸರಿಯಲ್ಲ. ಕೂಡಲೇ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.