ಶಿವಮೊಗ್ಗ: 150 ನೇ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಗಾಂಧಿ ಸಂಕಲ್ಪ ಯಾತ್ರೆಯನ್ನು ಇತಿಹಾಸ ಪ್ರಸಿದ್ಧವಾಗಿರುವ ಈಸೂರು ಗ್ರಾಮದಿಂದ ಪ್ರಾರಂಭಿಸಲಾಗಿದ್ದು, ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಚಾಲನೆ ನೀಡಿದರು.
ಪಾದಯಾತ್ರೆಯಲ್ಲಿ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ತ್ಯಾಗದ ಮಹತ್ವವನ್ನು ತಿಳಿಸುವ ಕಾರ್ಯ ಮಾಡಲಾಯಿತು.
ನಂತರ ಮಾತನಾಡಿದ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ದೇಶದ ಬಹು ಸಂಖ್ಯೆಯ ಜನರನ್ನು ಹೋರಾಟಕ್ಕೆ ಸೆಳೆಯುವಂತೆ ಮಾಡಿದ ಗಾಂಧಿ ಮಹಾತ್ಮರಾದರು. ಇವರು ದೇಶದ ಯಾವುದೋ ಒಂದು ಮೂಲೆಯಲ್ಲಿ ಹೋರಾಟಕ್ಕೆ ಕರೆ ನೀಡಿದ್ರೆ, ಈಸೂರಿನಂತಹ ಸಣ್ಣ ಗ್ರಾಮದಲ್ಲಿ ಹೋರಾಟ ಪ್ರಾರಂಭವಾಗುತ್ತದೆ. ಅವರ ಧ್ವನಿ ಎಷ್ಟು ಪ್ರಬಲವಾಗಿತ್ತು ಎಂಬುದನ್ನು ನಾವು ಯೋಚನೆ ಮಾಡಬೇಕು. ಅನೇಕ ಮಹಾನ್ ವ್ಯಕ್ತಿಗಳ ಹೋರಾಟದಿಂದ ನಾವು ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ. ಇಂತಹ ಪುಣ್ಯಾತ್ಮರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸುವ ಯತ್ನವನ್ನು ಮೋದಿ ಮಾಡಿದ್ದಾರೆ. ಇದಕ್ಕಾಗಿ ನಡೆಯುವ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಒಂದು ರಾಜಕೀಯ ಪಕ್ಷ ಕೇವಲ ಚುನಾವಣೆಗೆ ಸೀಮಿತವಾಗಿರದೇ, ಸಾಮಾಜಿಕವಾಗಿ ಚಿಂತನೆ ನಡೆಸಬೇಕು. ನಮಗೆ ಹಲವು ಹೋರಾಟಗಾರರ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಹಾಗಾಗಿ ಅವರನ್ನು ನೆನಪು ಮಾಡಿಕೊಳ್ಳಬೇಕು ಹಾಗೂ ಇವರುಗಳಿಂದ ನಮಗೆ ಸಂವಿಧಾನ ಲಭ್ಯವಾಗಿದೆ. ಈ ಚೌಕಟ್ಟಿನಲ್ಲಿ ನಾವು ಆಯ್ಕೆಯಾಗಿದ್ದೇವೆ. ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆ ಅಂಗವಾಗಿ ಒಬ್ಬ ಸಂಸದ ತನ್ನ ಕ್ಷೇತ್ರದಲ್ಲಿ ಕನಿಷ್ಟ 150 ಕಿ.ಮಿ ಪಾದಯಾತ್ರೆ ನಡೆಸಬೇಕು ಎಂಬ ಆದೇಶದ ಮೇರೆಗೆ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಗಾಂಧೀಜಿಯವರ ಸ್ವದೇಶಿ, ಸ್ವರಾಜ್, ಸ್ವಾವಲಂಬನೆ, ಸರಳತೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಗಾಂಧೀಜಿರವರು ರಾಮರಾಜ್ಯ, ಗ್ರಾಮ ಸ್ವಾರಾಜ್ ಆಗಬೇಕು ಎಂಬ ಕನಸು ಕಂಡಿದ್ದರು. ಇದನ್ನು ನನಸು ಮಾಡುವ ದೃಷ್ಟಿಯಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಪಾದಯಾತ್ರೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.