ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿದ್ಯಾನಗರದ ಕಂಟ್ರಿ ಕ್ಲಬ್ ಹತ್ತಿರವಿರುವ ಮಹಾವೀರ ಗೋಶಾಲೆಗೆ ನೀರು ನುಗ್ಗಿದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಗೋವುಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆ ಕೆ.ಎಸ್ ಈಶ್ವರಪ್ಪ ಗೋ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ವಿಚಾರಿಸಿದರು.
ಮಹಾವೀರ ಗೋಶಾಲೆಯಲ್ಲಿ 400 ಕ್ಕೂ ಹೆಚ್ಚು ಗೋವುಗಳಿದ್ದು, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ, ಸಿವಿಲ್ ಡಿಪೇನ್ಸ್ ಸಿಬ್ಬಂದಿ ಸಾಹಸದಿಂದ ಗೋವುಗಳನ್ನ ರಕ್ಷಣೆ ಮಾಡಲಾಗಿತ್ತು. ಆದರೂ ಸಹ ಇಪ್ಪತ್ತು ಗೋವುಗಳು ಸಾವನ್ನಪ್ಪಿದ್ದವು. ಹಾಗಾಗಿ ಗೋ ಶಾಲೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪನವರು ಅಲ್ಲಿನ ಸಮಸ್ಯೆ ಮತ್ತು ಗೋ ಶಾಲೆಯಲ್ಲಿ ಇರುವ ಗೋವುಗಳನ್ನ ವೀಕ್ಷಿಸಿದರು.
ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಶಾಲೆಗೆ ನೀರು ನುಗ್ಗಿ, ಗೋವುಗಳು ಸಾವನ್ನಪ್ಪಿದ್ದಾಗ ನಾನು ಕೊಡಗಿನಲ್ಲಿದ್ದೆ. ಅವತ್ತು ಗೋ ಶಾಲೆಯ ಗುರುಗಳು ಕರೆ ಮಾಡಿ ಹೀಗೆ ಆಗಿದೆ ಎಂದು ತಿಳಿಸಿದ್ದರು. ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದೆ. ಅವರು ಸಹ ತಕ್ಷಣ ಕಾರ್ಯ ಪ್ರವೃತರಾಗಿ 400 ಕ್ಕೂ ಹೆಚ್ಚು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ. ಅವರ ಸಾಹಸಕ್ಕೆ ಶ್ಲಾಘಿಸಬೇಕು. ಆದರೂ ಸಹ 20 ಗೋವುಗಳು ಸಾವನ್ನಪ್ಪಿರುವುದು ನೋವು ತಂದಿದೆ ಎಂದರು.