ಶಿವಮೊಗ್ಗ: ಹತ್ಯೆಯಾದ ಹಿಂದು ಕಾರ್ಯಕರ್ತ ಹರ್ಷ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ಮಾಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ಎಂದೆಂದಿಗೂ ನಾವಿರುತ್ತೇವೆ ಎಂದು ಉಭಯ ನಾಯಕರು ಹರ್ಷ ಕುಟುಂಬಸ್ಥರಿಗೆ ಅಭಯ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದುಪರ ಕಾರ್ಯಕರ್ತ ಹರ್ಷರನ್ನು ದಾರುಣವಾಗಿ ಕೊಲೆ ಮಾಡಿದ್ದಾರೆ. ಹಿಂದು ಯುವಕರ ಕೊಲೆಗೆ ಅಂತ್ಯ ಹಾಡಲೇಬೇಕಿದೆ. ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದಲ್ಲಿ ಹಿಂದುಗಳ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.
ಹಿಂದು ಕಾರ್ಯಕರ್ತರ ಹತ್ಯೆಯ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಅಡಗಿದೆ. ಎಲ್ಲೆಲ್ಲಿ ಮುಸ್ಲಿಮರು ಹೆಚ್ಚಿದ್ದಾರೋ ಅಲ್ಲಿ ಹಿಂದುಗಳು ಬದುಕುವುದೇ ಕಷ್ಟವಾಗಿದೆ. ಹಿಂದು ಯುವಕರ ಕೊಲೆ ಮಾಡಿದವರು ಬೇಗನೇ ಖುಲಾಸೆಯಾಗುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ಮುಸ್ಲಿಂ ಯುವಕರು ದುಷ್ಕೃತ್ಯ ಎಸಗುತ್ತಿದ್ದಾರೆ. ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನಿಂದ ಹಿಂದು ವಿರೋಧಿ ನೀತಿ: ಈ ಹಿಂದೆ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಹಿಜಾಬ್ ವಿಷಯದಲ್ಲಿ ಗಲಾಟೆ ಆರಂಭಿಸಿದರು. ಹರ್ಷನ ಹತ್ಯೆ ಪ್ರಕರಣದಲ್ಲಿಯೂ ಸಹ ಯುವತಿಯರನ್ನು ಮುಂದಿಟ್ಟುಕೊಂಡಿದ್ದು ಕೊಲೆ ಮಾಡಿದ್ದು ದೃಢಪಟ್ಟಿದೆ. ಕಾಂಗ್ರೆಸ್ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಒಬ್ಬ ಮುಸ್ಲಿಂ ಮೃತಪಟ್ಟಿದ್ದರೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಕೂಡ ಬಂದು ಕುಟುಂಬದವರಿಗ ಸಾಂತ್ವನ ಹೇಳುತ್ತಿದ್ದರು. ಆದರೆ, ಹರ್ಷನ ಮನೆಗೆ ಯಾವೊಬ್ಬ ಕಾಂಗ್ರೆಸ್ ನಾಯಕರು ಬಂದಿಲ್ಲ ಎಂದರು.
ಹಿಂದುಗಳನ್ನು ವಿರೋಧಿಸಿದ್ದಕ್ಕಾಗಿಯೇ ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿದೆ. ಇಷ್ಟಾದರೂ ಆ ಪಕ್ಷ ಪಾಠ ಕಲಿತಿಲ್ಲ. ಅಧಿವೇಶನದಲ್ಲಿ ಹರ್ಷನ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಹಿಂದುಗಳ ರಕ್ಷಣೆ, ದೇಶದ ರಕ್ಷಣೆ ನಮ್ಮ ಮೊದಲ ಕರ್ತವ್ಯ. ಹಿಂದುಗಳ ಹಿಂದೆ ನಾವೆಂದೂ ಇರುತ್ತೇವೆ. ನಮಗೆ ಹಿಂದುಗಳ ಸಮಾಧಿ ಮೇಲೆ ಅಧಿಕಾರ ನಡೆಸುವ ಅಗತ್ಯವಿಲ್ಲ. ಗೋಹತ್ಯೆ ನಿಷೇಧ, ಹಿಂದುತ್ವದ ರಕ್ಷಣೆಗಾಗಿ ಹೋರಾಟ ಮಾಡಿ ಮಡಿಯುವ ಪ್ರಸಂಗ ಹರ್ಷನ ಕೊಲೆಯೊಂದಿಗೆ ಕೊನೆಯಾಗಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ದಿಲ್ಲಿಗೆ ಪ್ರಯಾಣಿಸಿದ ರಾಜ್ಯ ಕಾಂಗ್ರೆಸ್ ನಾಯಕರು: ಹೈಕಮಾಂಡ್ ಜೊತೆ ಸಭೆ