ಶಿವಮೊಗ್ಗ: ಅಧಿವೇಶನ ವ್ಯವಸ್ಥಿತವಾಗಿ ನಡೆದಿದೆ. ಎಲ್ಲಾ ಬಿಲ್ಗಳ ಮೇಲೆ ಕಾಂಗ್ರೆಸ್, ಜೆಡಿಎಸ್ನವರು ಮುಕ್ತವಾಗಿ ಚರ್ಚಿಸಿರೋದು ನಮಗೆಲ್ಲರಿಗೂ ಸಮಾಧಾನ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದೇ ಒಂದು ನೋವು ಎಂದರೆ ಕೊನೆ ದಿನ ಲೋಕಸಭಾ ಸ್ಪೀಕರ್ ಬಂದಾಗ ಕಾಂಗ್ರೆಸ್ನವರು ಸದನವನ್ನು ಬಹಿಷ್ಕರಿಸಿದ್ದು,ತುಂಬಾ ನೋವಾಗಿದೆ ಎಂದರು.
ಇಡಿ ದೇಶದ ಲೋಕಸಭಾ ಸ್ಪೀಕರ್ ಒಬ್ಬರು ಕರ್ನಾಟಕದ ವಿಧಾನಸಭೆಗೆ ಬಂದಿರುವುದು ಮೊದಲ ಬಾರಿ. ಎಲ್ಲಾ ಪಕ್ಷದವರನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್ನವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಯಾಕೆ ಇರಲಿಲ್ಲ ಎನ್ನುವುದಕ್ಕೆ ಅವರೇ ಉತ್ತರ ಕೊಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ರಾಜ್ಯದಲ್ಲಿದ್ದಾಗ ಬೆಲೆ ಏರಿಕೆ ಆಗಿಲ್ವಾ?. ಬೆಲೆ ಏರಿಕೆಯನ್ನು ರಾಜಕೀಯ ದಾಳವಾಗಿ ಬಳಸುವುದು ಒಳ್ಳೆಯದಲ್ಲ. ಬೆಲೆ ಏರಿಕೆ, ಇಳಿಕೆ ಎನ್ನುವ ವ್ಯವಸ್ಥೆ ನಡೆಯುತ್ತಿರುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಹ ನಾವು ಗೆದ್ದಿದ್ದೇವೆ ಹಾಗೂ ಮೇಯರ್ ಉಪ ಮೇಯರ್ ಪಡೆದುಕೊಂಡಿದ್ದೇವೆ. ಜನ ಕಾಂಗ್ರೆಸ್ನವರು ಹೇಳುವುದನ್ನು ಒಪ್ಪಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯನ್ನು ಒಪ್ಪುತ್ತಾರೆ. ಏಕೆಂದರೆ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಭಾರತೀಯ ಜನತಾ ಪಕ್ಷ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಭಾರತ್ ಬಂದ್ ವಿಚಾರವಾಗಿ ಮಾತನಾಡಿದ ಅವರು ಭಾರತ್ ಬಂದ್ ಮಾಡೋದಕ್ಕೆ ಅವರಿಗೆ ಸ್ವತಂತ್ರ ಇದೆ. ನಾನು ಒಂದು ನೇರ ಪ್ರಶ್ನೆ ಕೇಳುತ್ತೇನೆ. ಒಬ್ಬ ಫ್ಯಾಕ್ಟರಿ ಮಾಲೀಕ ತಾನು ಉತ್ಪಾದಿಸಿದ ವಸ್ತುವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾದರೆ ರೈತ ಯಾಕೆ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಾರದು?. ಯಾವುದೇ ಕಾರಣಕ್ಕೂ ರಾಜ್ಯದ ಹಾಗೂ ದೇಶದ ಜನ ಭಾರತ ಬಂದ್ಗೆ ಬೆಂಬಲ ನೀಡಲ್ಲ. ರೈತರು ಬಿಜೆಪಿಯೊಂದಿಗೆ ಇದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 20 ಹಳ್ಳಿಗಳ ಸ್ಥಳಾಂತರ ಕೆಲಸಕ್ಕೆ ಸಿದ್ಧತೆ : ಸಚಿವ ಕಾರಜೋಳ