ಶಿವಮೊಗ್ಗ: ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾದ ಪ್ರಕರಣದಲ್ಲಿ ಕೇವಲ ಇಬ್ಬರನ್ನು ಬಂಧಿಸಿರುವುದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ (Minister K.S.Eshwarappa) ಪೊಲೀಸರ ವಿರುದ್ಧ ಗರಂ ಆದರು.
ವಿವರ:
ಪೌರ ಕಾರ್ಮಿಕರಾದ ದೇವರಾಜ್ ಹಾಗೂ ಮಂಜುನಾಥ್ ಎಂಬುವವರ ಮೇಲೆ ಟಿಪ್ಪು ನಗರದಲ್ಲಿ ಹಲ್ಲೆ ನಡೆಸಲಾಗಿತ್ತು. ಗಾಯಗೊಂಡವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ವಿಚಾರಿಸಲು ಹೋದ ಈಶ್ವರಪ್ಪ ಪೊಲೀಸ್ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಆಸ್ಪತ್ರೆಯಿಂದಲೇ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರಿಗೆ ಕರೆ ಮಾಡಿ ತುಂಗಾ ನಗರ ಪೊಲೀಸರು ಹಲ್ಲೆ ನಡೆಸಿದವರನ್ನು ಬಂಧಿಸದೇ ಸುಮ್ಮನೆ ಇದ್ದಾರೆ. ಹೀಗೆ ಆದ್ರೆ ಹೇಗೆ? ಹಲ್ಲೆ ನಡೆಸಿದವರನ್ನು ಬಂಧಿಸುವುದೇ ನಿಮ್ಮ ಕೆಲಸ. ಆದರೆ ಅದನ್ನು ಬಿಟ್ಟು ನಿಮ್ಮ ಇಲಾಖೆಯವರು ಏನು ಮಾಡುತ್ತಿದ್ದಾರೆ?. ಇಂದು ಸಂಜೆ ವೇಳೆಗೆ ಹಲ್ಲೆ ನಡೆಸಿದ ಎಲ್ಲರನ್ನೂ ಬಂಧಿಸಬೇಕು. ಇಲ್ಲವಾದಲ್ಲಿ ನಿಮ್ಮ ಇಲಾಖೆಯದ್ದೇ ಒಂದು ಮೀಟಿಂಗ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಧುಗಿರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ: ತಪ್ಪಿದ ಭಾರಿ ಅನಾಹುತ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಈ ವೇಳೆ ಮೇಯರ್ ಸುನೀತ ಅಣ್ಣಪ್ಪ ಸೇರಿದಂತೆ ಬಿಜೆಪಿ ಮುಖಂಡರಿದ್ದರು.