ಶಿವಮೊಗ್ಗ: ನಗರದ ಸಿಮ್ಸ್ ಬೋಧನಾಸ್ಪತ್ರೆ ಮೆಗ್ಗಾನ್ನಲ್ಲಿ ನಾಳೆಯಿಂದ ಎಲ್ಲಾ ರೀತಿಯ ಚಿಕಿತ್ಸೆ ದೊರೆಯಲಿದ್ದು, ಕೋವಿಡ್ ರೋಗಿಗಳಿಗೆ ಮೆಗ್ಗಾನ್ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಸಿಮ್ಸ್ನ ಆಡಳಿತ ಮಂಡಳಿಯವರೊಂದಿಗೆ ಸಚಿವರು ಸಭೆ ನಡೆಸಿದ್ರು. ಬಳಿಕ ಮಾತನಾಡಿದ ಅವರು, ಮೆಗ್ಗಾನ್ ಅಸ್ಪತ್ರೆಯಲ್ಲಿಯೇ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ಮೂಳೆ ವಿಭಾಗ ಸೇರಿದಂತೆ ಪ್ರಮುಖ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರಲಿಲ್ಲ. ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ನಾಳೆಯಿಂದಲೇ ಕೊರೊನಾ ಸೋಂಕಿತರನ್ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಿ ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುವುದು. ಅಲ್ಲದೆ, ಡಯಾಲಿಸಿಸ್ಗಾಗಿ ಮೆಗ್ಗಾನ್ ಆಸ್ಪತ್ರೆಯ ಮಷಿನ್ಗಳನ್ನ ಬೇರೆ ಆಸ್ಪತ್ರೆಗೆ ನೀಡಲಾಗಿತ್ತು. ಶನಿವಾರದಿಂದ ಮೆಗ್ಗಾನ್ನಲ್ಲಿಯೇ ಡಯಾಲಿಸಿಸ್ ಮಾಡಲಾಗುವುದು ಎಂದರು.
ಆಸ್ಪತ್ರೆಗೆ ವೈದ್ಯರ ಹಾಜರಾತಿ ಕಡ್ಡಾಯ: ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ 130 ವೈದ್ಯರಿದ್ದಾರೆ. ಇವರು ಸರಿಯಾಗಿ ಆಸ್ಪತ್ರೆಗೆ ಆಗಮಿಸುತ್ತಿಲ್ಲ. ಹಾಜರಾತಿ ಹಾಕಿ, ಮನೆಗೆ ತೆರಳುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ತಮ್ಮ ಕಲಿಕಾ ವಿದ್ಯಾರ್ಥಿಗಳ ಮೂಲಕ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದು ಸರಿಯಲ್ಲ. ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಇದಕ್ಕಾಗಿ ಸಿಮ್ಸ್ ಆಡಳಿತ ಮಂಡಳಿಯ ಡಾ. ವಾಣಿ ಕೋರಿ, ಡಾ. ಗೌತಮ್ ಹಾಗೂ ದಿವಾಕರ್ ನೇತೃತ್ಚದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿಯು ವೈದ್ಯರು ಆಸ್ಪತ್ರೆಗೆ ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ ಎಂಬುದರ ಬಗ್ಗೆ ನಿಗಾ ವಹಿಸಲಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 69 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ 29 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಉಳಿದ 40 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.