ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದರು.
ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಧುಸೂದನ್ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಪುಷ್ಪಗುಚ್ಚ ನೀಡಿ, ಅಭಿನಂದನೆ ಸಲ್ಲಿಸಿದರು. ಈ ಆರಾಧನಾ ಸಮಿತಿಯು ದೇವಾಲಯಗಳ ಅಭಿವೃದ್ದಿ, ಜೀರ್ಣೋದ್ಧಾರ, ದೇವಾಲಯ ಸಮಿತಿ ರಚನೆ ಸೇರಿದಂತೆ ಇತರೆ ಕಾರ್ಯಗಳನ್ನು ನಿರ್ವಹಿಸುತ್ತದೆ.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ತಕ್ಕ ವ್ಯಕ್ತಿಗೆ ತಕ್ಕನಾದ ಹುದ್ದೆ ಲಭ್ಯವಾಗಿದೆ ಎಂದು ಮಧುಸೂದನ್ ಅವರಿಗೆ ಶುಭಾಶಯ ಕೋರಿದರು. ಜೊತೆಗೆ ಸಮಿತಿಯ ಮೂಲಕ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಂಗಾರಪ್ಪನವರ ಕಾಲದಲ್ಲಿ ಪ್ರಾರಂಭವಾದ ಆರಾಧನಾ ಸಮಿತಿ: ದಿವಂಗತ ಎಸ್. ಬಂಗಾರಪ್ಪನವರು ಸಿಎಂ ಆಗಿದ್ದಾಗ ಆರಾಧನಾ ಸಮಿತಿಯನ್ನು ಜಾರಿಗೆ ತಂದಿದ್ದರು. ಇದು ಮುಜರಾಯಿ ಇಲಾಖೆ ಜೊತೆ-ಜೊತೆಯಾಗಿ ಕಾರ್ಯನಿರ್ವಹಿಸುವ ಸಮಿತಿಯಾಗಿದೆ. ಇದರ ಅಧ್ಯಕ್ಷರನ್ನಾಗಿ ನೇಮಿಸುವ ಅಧಿಕಾರ ಆಯಾ ಕ್ಷೇತ್ರದ ಶಾಸಕರುಗಳಿಗೆ ಮಾತ್ರ ಇರುತ್ತದೆ. ಈ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಗಳಾಗಿ ತಹಶೀಲ್ದಾರ್ ಹಾಗೂ ಇವರ ಜೊತೆಗೆ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ಇರುತ್ತಾರೆ. ಈ ಸಮಿತಿಯು ದೇವಾಲಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಯನ್ನು ರಾಜ್ಯ ಸರ್ಕಾರದ ಮುಂದೆ ಇಡುವುದು ಸಮಿತಿಯ ಕೆಲಸವಾಗಿದೆ.