ಮಂಡ್ಯ/ಶಿವಮೊಗ್ಗ/ಬಳ್ಳಾರಿ : ರಾಜ್ಯದಲ್ಲಿ ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗು ಪಡೆದಿದೆ. ಮಂಡ್ಯದ 3, ಶಿವಮೊಗ್ಗದ 4 ಹಾಗೂ ಬಳ್ಳಾರಿಯ 3 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ.
ಮಂಡ್ಯ ಜಿಲ್ಲೆಯ ಮೂರು ಪುರಸಭೆಗೆ ಇಂದು ಮತದಾನ ನಡೆಯುತ್ತಿದೆ. ಮತದಾರರು ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಶ್ರೀರಂಗಪಟ್ಟಣ, ಕೆಆರ್‌ಪೇಟೆ, ಮಳವಳ್ಳಿ ಪುರಸಭೆಗೆ ಚುನಾವಣೆ ನಡೆಯುತ್ತಿದ್ದು, 3 ಪುರಸಭೆಗಳಲ್ಲಿ ತಲಾ 23 ವಾರ್ಡ್‌ಗೆ ಮತದಾನ ನಡೆಯುತ್ತಿದೆ. ಮೂರು ಪುರಸಭೆಗಳಲ್ಲಿ 1,35,487 ಮತದಾರರಿದ್ದಾರೆ. ಇವರಲ್ಲಿ 69,127 ಮಹಿಳಾ ಹಾಗೂ 66,338 ಪುರುಷ ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಮಾಡಿಕೊಂಡಿದೆ. ಕೆಆರ್ ಪೇಟೆ, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಪುರಸಭೆಯ ತಲಾ ಒಟ್ಟು 23 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ನಾಲ್ಕು ಕಡೆ ಸ್ಥಳೀಯ ಸಂಸ್ಥೆ ಚುನಾವಣೆ...
ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಹಾಗೂ ಹೊಸನಗರ ಪಟ್ಟಣ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಬೂತ್ ನಂಬರ್ 134 ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
![Local Body election](https://etvbharatimages.akamaized.net/etvbharat/prod-images/3411892_mngb.jpg)
ಶಿಕಾರಿಪುರ ಪಟ್ಟಣ ಪಂಚಾಯತ್‌ನಲ್ಲಿ 23 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸಾಗರ ನಗರಸಭೆಯಲ್ಲಿ 31 ಸ್ಥಾನಗಳಿಗೆ 133 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಹೊಸನಗರ ಪಟ್ಟಣ ಪಂಚಾಯತ್‌ನ 11 ಸ್ಥಾನಗಳಿಗೆ 25 ಅಭ್ಯರ್ಥಿಗಳು, ಶಿರಾಳಕೊಪ್ಪ ಪಟ್ಟಣ ಪಂಚಾಯತ್‌ನ 17 ಸ್ಥಾನಗಳಿಗೆ 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಂಡೂರು ಪುರಸಭೆ : ಸಚಿವ ತುಕಾರಾಂ ಮತದಾನ
ಬಳ್ಳಾರಿ ಜಿಲ್ಲೆಯ ಸಂಡೂರು ಪುರಸಭೆಗೆ ಮತದಾನ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಹಾಗೂ ಕುಟುಂಬ ಸದಸ್ಯರು ಇಂದು ಮತದಾನ ಮಾಡಿದರು. ಪಟ್ಟಣದ 12ನೇ ವಾರ್ಡ್ನ 16ನೇ ಮತಗಟ್ಟೆಗೆ ಸಚಿವ ತುಕಾರಾಂ ಕುಟುಂಬ ಸದಸ್ಯರು ತೆರಳಿ ತಮ್ಮ ಹಕ್ಕು ಚಲಾಯಿಸಿದರು.
![Local Body election](https://etvbharatimages.akamaized.net/etvbharat/prod-images/3411892_mngbh.png)
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಈ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.