ಶಿವಮೊಗ್ಗ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂಜಾರ ಸಮುದಾಯದ ಆರಾಧ್ಯದೈವ ಸಂತ ಶ್ರೀಸೇವಾಲಾಲ್ ಮಹಾರಾಜರ ಹೆಸರನ್ನು ಇಡುವಂತೆ ಒತ್ತಾಯಿಸಿ ಕರ್ನಾಟಕ ಬಂಜಾರ ವಿದ್ಯಾರ್ಥಿ ಸಂಘದ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ನಗರದ ಶಿವಪ್ಪನಾಯಕ ವೃತ್ತದಲ್ಲಿ ರಕ್ತ ಚಳವಳಿ ನಡೆಸಿದ ಸದಸ್ಯರು, ವಿಮಾನ ನಿಲ್ದಾಣಕ್ಕಾಗಿ ಬಂಜಾರ ಜನಾಂಗದ 769 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಅದಕ್ಕಾಗಿ ಎರಡು ತಾಂಡಾಗಳನ್ನು ಸ್ಥಳಾಂತರಗೊಳಿಸಲಾಗಿದೆ. ಅಲ್ಲಿ ವಾಸಿಸುತ್ತಿದ್ದ 220ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದ ಸ್ಥಳದಲ್ಲಿದ್ದ ಸೇವಾಲಾಲ್ ಮರಿಯಮ್ಮ ದೇವಸ್ಥಾನವನ್ನು ಧ್ವಂಸ ಮಾಡಲಾಗಿದೆ. ಹಾಗಾಗಿ ದೇವಸ್ಥಾನ ಧ್ವಂಸಗೊಳಿಸಲು ಆದೇಶಿಸಿದ್ದ ಅಧಿಕಾರಿಗಳ ವಿರುದ್ಧ ಪೋಲಿಸರು ಸ್ವಯಂ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಅದೇ ಜಾಗದಲ್ಲಿ ದೇವಸ್ಥಾನವನ್ನು ಮರು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಮಹಾರಾಜರ ಹೆಸರಿಡಬೇಕು. ಭೂಮಿ ಕಳೆದುಕೊಂಡವರಿಗೆ ಸರ್ಕಾರಿ ಕೆಲಸ ನೀಡಬೇಕು. ಹಾಗೂ ಬಂಜಾರ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಎಚ್ಚರವಹಿಸಬೇಕು ಎಂದು ರಕ್ತದಲ್ಲಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.