ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಈಶ್ವರಪ್ಪ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಹತ್ಯೆ ಮಾಡಿದವರನ್ನು ಆದಷ್ಟು ಬೇಗ ಬಂಧಿಸಲಿದ್ದೇವೆ ಎಂದರು. ಇಂದು ಅಂತಿಮ ಯಾತ್ರೆ ವೇಳೆ ನಡೆದ ಹಲ್ಲೆಗಳು ಹಿಂಸಾತ್ಮಕ ಕೃತ್ಯಗಳನ್ನು ಶಿವಮೊಗ್ಗದವರು ಮಾಡಿಲ್ಲ. ಬೇರೆ ಜಿಲ್ಲೆಯಿಂದ, ರಾಜ್ಯದಿಂದ, ಬೇರೆ ದೇಶದಿಂದ ಬಂದವರು ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.
ಈ ಕೃತ್ಯದ ಹಿಂದೆ ಷಡ್ಯಂತ್ರ ಇದೆ. ಹಾಗಾಗಿ ರಾಷ್ಟ್ರೀಯ ತನಿಖಾ ತಳದಿಂದ ತನಿಖೆ ನಡೆಸಿದರೆ ಹತ್ಯೆ ಮಾಡಿದವರು ಎಲ್ಲಿಯವರು?, ಇದರಲ್ಲಿ ಯಾರು ಭಾಗಿಯಾಗಿದ್ದಾರೆ? ಎಂದು ತಿಳಿಯಲಿದೆ. ನಾನು ಸಹ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದರು.
ಹರ್ಷನ ಕುಟುಂಬಕ್ಕೆ ಏನು ಸಹಾಯ ಬೇಕೊ ಅದನ್ನು ನಾವು ಮತ್ತು ನಮ್ಮ ಸಂಘಟನೆಯಿಂದ ಮಾಡುತ್ತೇವೆ. ಹರ್ಷ ಕೊಲೆಗೆ ಈಶ್ವರಪ್ಪನವರೇ ಕಾರಣ ಎಂದಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ಗೆ ನೊಬೆಲ್ ಪ್ರಶಸ್ತಿ ನೀಡಬೇಕು. ಅವರು ಕಾಂಗ್ರೆಸ್ನಲ್ಲಿ ಇದ್ದಾರೆ ಎಂಬುದನ್ನು ತೋರಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಡಿಕೆಶಿ ಕೂಡ ಸುಳ್ಳು ಹೇಳಿದ್ದರು. ಈಗ ಇವರು ಹೇಳಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಶಿವಮೊಗ್ಗ ಎಸ್ಪಿ