ಶಿವಮೊಗ್ಗ: ಗಾಂಧಿ ಜಯಂತಿ ಅಂಗವಾಗಿ ಮಾಜಿ ಸಚಿವ ರತ್ನಾಕರ್ ರವರು ಮಂಡಗದ್ದೆಯ ಅರಣ್ಯ ಇಲಾಖೆರವರು ಬಡ ರೈತರಿಗೆ ತೂಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಿಂದ ಮಂಡಗದ್ದೆಯ ಅರಣ್ಯ ಇಲಾಖೆ ಕಚೇರಿ ವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಈ ಪಾದಯಾತ್ರೆಗೆ ಗ್ರಾಮದವರಿಂದಲೇ ವಿರೋಧ ವ್ಯಕ್ತವಾಗಿದೆ.
ಈ ಭಾಗದ ಬಡ ಜನರ ವಿರುದ್ಧ ಅರಣ್ಯ ಇಲಾಖೆಯವರು ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಒತ್ತುವರಿ ಹೆಸರಿನಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹೆಗಲತ್ತಿಯ ಸಿಂಗನಬಿದರೆ ಗ್ರಾಮಪಂಚಾಯತಿಯ ಹೆಗಲತ್ತಿ ಕೊಪ್ಪಾಸರದ ನಿವಾಸಿ ಮಂಜುನಾಥ್ ಬಿನ್ ಬೋಡು ಪೂಜಾರಿ ಮನೆಯಿಂದ ಪಾದಯಾತ್ರೆಯನ್ನು ಕಿಮ್ಮನೆ ರತ್ನಾಕರ್ ಹಮ್ಮಿಕೊಂಡಿದ್ದಾರೆ.
ಹೋರಾಟದಲ್ಲಿ ನಾನು ಭಾಗಿಯಾಗಲ್ಲ ಎಂದ ಮಂಜುನಾಥ್!
ನಮಗೂ ನಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯವರು ಯಾವುದೇ ತೊಂದ್ರೆ ಕೊಟ್ಟಿಲ್ಲ. ಈ ಹೋರಾಟ ನನ್ನ ಗಮನಕ್ಕೆ ಬಂದಿಲ್ಲ. ಪಾದಯಾತ್ರೆಯ ಕುರಿತು ನಮ್ಮ ಕುಟುಂಬದ ಜೊತೆ ಚರ್ಚೆ ನಡೆಸಿಲ್ಲ. ಹೋರಾಟದಲ್ಲಿ ನಾನು ಭಾಗಿಯಾಗಲ್ಲ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ.
ಇದು ತೀರ್ಥಹಳ್ಳಿ ರಾಜಕೀಯದಲ್ಲಿ ಹೊಸ ವಿಷಯವಾಗಿದೆ. ಕಿಮ್ಮನೆ ರತ್ನಾಕರ್ ಮಂಜುನಾಥ್ ಕುಟುಂಬದವರ ಅನುಮತಿ ಪಡೆಯದೆ ಪಾದಯಾತ್ರೆ ರೂಪಿಸಿದ್ರಾ, ಅಥವಾ ಮಂಜುನಾಥ್ ಈಗ ಉಲ್ಟಾ ಮಾತನಾಡುತ್ತಿದ್ದರಾ ಎಂಬ ಅನುಮಾನ ಮೂಡಿದೆ. ತೀರ್ಥಹಳ್ಳಿಯಲ್ಲಿ ಪಾದಯಾತ್ರೆಯೇ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.