ಶಿವಮೊಗ್ಗ: ಕೋವಿಡ್ ಎರಡನೇ ಅಲೆ ನಿರ್ವಹಿಸಲು ಆಗದ ಈಶ್ವರಪ್ಪನವರು, ಮೂರನೇ ಅಲೆಗೆ ಹೆಣ ಎತ್ತಲು ಸಿದ್ಧತೆ ನಡೆಸುತ್ತಿರಬೇಕು ಎಂದು ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಕಿಡಿಕಾರಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಡಳಿತ ಕುಸಿತ ಕಂಡಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಶವ ಪಡೆಯಲು ಮಧ್ಯವರ್ತಿಗಳು ಇರಲೇಬೇಕಾದ ಪರಿಸ್ಥಿತಿಯಿದೆ. ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾ ಮಂತ್ರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಎಂಎಲ್ಸಿ ಆರ್.ಪ್ರಸನ್ನ ಕುಮಾರ್ ಮಾತನಾಡಿ, ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಬಿಜೆಪಿಯೇ ಕಾರಣ. ಬಿಜೆಪಿಯವರು ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಿ, ಕೊರೊನಾ ಹೆಚ್ಚಾಗಲು ಕಾರಣವಾಗಿದ್ದಾರೆ. ರಾಜ್ಯದಲ್ಲಿ ಒಂದು ಲೋಕಸಭಾ ಹಾಗು ಎರಡು ವಿಧಾನಸಭಾ ಚುನಾವಣೆ ನಡೆಸಿರುವುದೇ ಸೋಂಕು ಹರಡಲು ಕಾರಣವಾಯಿತು. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿತ್ತು. ಚುನಾವಣೆಯಿಂದ ಸರ್ಕಾರದ ಮೇಲೆ ಯಾವುದೇ ಪ್ರಭಾವ ಉಂಟಾಗುತ್ತಿರಲಿಲ್ಲ. ಆದರೂ ಸಹ ದೊಡ್ಡ-ದೊಡ್ಡ ರ್ಯಾಲಿ ನಡೆಸಲಾಯಿತು. ಮಂತ್ರಿಗಳು ರ್ಯಾಲಿ ನಡೆಸಿ ಕೊರೊನಾ ಹಬ್ಬಿಸಿದರು. ಬೆಳಗಾವಿ ಚುನಾವಣೆಗೆ ಯಾರೆಲ್ಲಾ ಹೋಗಿದ್ದರೋ ಅವರೆಲ್ಲಾ ಕೊರೊನಾದಿಂದ ಒದ್ದಾಡಿದ್ದಾರೆ.
ಆದ್ರೀಗ ಬಿಜೆಪಿಯವರು ಕೊರೊನಾ ಹರಡಲು ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಜನರ ಪರವಾಗಿ ಇರುತ್ತದೆ. ಲಾಕ್ಡೌನ್ನಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಧ್ವನಿ ಎತ್ತಿದ್ದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂದರು.
ಇದನ್ನೂ ಓದಿ: ಸಾವಿನ ಸಂಖ್ಯೆ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ: ಬಿ.ಸಿ.ಪಾಟೀಲ್