ಶಿವಮೊಗ್ಗ: ಜುಲೈ 26ರಂದು 'ಕಾರ್ಗಿಲ್ ವಿಜಯ ದಿವಸ್' ಅನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಪಾಕ್ ವಿರುದ್ಧ ಇದೇ ದಿನ 1999ರಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರು ಯುದ್ಧ ಗೆದ್ದಿದ್ದರು. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಅನೇಕ ಯೋಧರು ಭಾಗಿಯಾಗಿದ್ದರು. ಮಲೆನಾಡಿನ ಮಾಜಿ ಯೋಧ ಮೋಹನ್, ಹನುಮಂತಪ್ಪ ಹಾಗೂ ಮಾಲತೇಶಪ್ಪ ಎಂಬ ಮೂವರು ತಮ್ಮ ಕಾರ್ಗಿಲ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕಾರ್ಗಿಲ್ ವಿಜಯದ ಮೆಲುಕು: ಜಮ್ಮುಕಾಶ್ಮೀರ ವರ್ಷವಿಡೀ ಹಿಮಪಾತವಾಗುವ ಅತ್ಯಂತ ಕನಿಷ್ಟ ತಾಪಮಾನ ಹೊಂದಿರುವ ಪ್ರದೇಶ. ಇಲ್ಲಿ ಅಕ್ಟೋಬರ್ನಿಂದ ಮಾರ್ಚ್ವರೆಗೆ ಭಾರತ ಹಾಗೂ ಪಾಕಿಸ್ತಾನದ ಸೈನ್ಯ ಈ ಭಾಗದ ಗಡಿಯಲ್ಲಿ ಇರದೆ ವಾಪಸ್ ಆಗುತ್ತಿದ್ದರು. ಮಾರ್ಚ್ ನಂತರ ಮತ್ತೆ ತಮ್ಮ ತಮ್ಮ ಗಡಿ ಭಾಗದ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಅದರಂತೆ ಭಾರತ ಅಕ್ಟೋಬರ್ನಲ್ಲಿ ತನ್ನ ಸೈನಿಕರನ್ನು ವಾಪಸ್ ಕರೆಯಿಸಿಕೊಂಡಿತು.
ಆದರೆ, ಪಾಕಿಸ್ತಾನ ಮಾತ್ರ ತನ್ನ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳದೆ ಅಲ್ಲಿಗೆ ಇನ್ನಷ್ಟು ಸೈನಿಕರನ್ನು ಕಳುಹಿಸಿತು. ಅವರು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ದಾಟಿ ಭಾರತದ ಗಡಿಗೆ ನುಗ್ಗಿ ಇಲ್ಲಿ ಭಾರತೀಯ ಸೈನಿಕರ ಬಂಕರ್ಗಳಲ್ಲಿ ಆಶ್ರಯ ಪಡೆದರು. ಫೆಬ್ರವರಿ ಅಂತ್ಯದ ವೇಳೆಗೆ ಭಾರತದ ಸೈನಿಕರು ಪೆಟ್ರೋಲಿಂಗ್‌ಗೆಂದು ಹೋದ ಒಂದು ತಂಡವನ್ನು ಪಾಕಿಸ್ತಾನದ ಸೈನಿಕರು ಬ್ಲಾಂಕ್ ರೇಂಜ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡುತ್ತಾರೆ.
ಪೆಟ್ರೋಲಿಂಗ್ ಎಂದು ಹೋದ ತಂಡ ಯಾವುದೇ ಮಾಹಿತಿ ನೀಡದೆ, ತಂಡದವರು ವಾಪಸ್ ಆಗದೆ ಹೋದಾಗ ಅನುಮಾನಗೊಂಡ ಇನ್ನೊಂದು ತಂಡ ಹೋದಾಗ ಅಲ್ಲಿ ಭಾರತೀಯ ಸೈನಿಕರ ಹತ್ಯೆಯಾಗಿದ್ದು ತಿಳಿದು ಬರುತ್ತದೆ. ನಂತರ ಭಾರತೀಯ ಸೈನಿಕರು ಹೋದಾಗ ಶೆಲ್ ದಾಳಿ ನಡೆಯುತ್ತದೆ. ಅಲ್ಲಿಂದ ಯುದ್ಧ ಪ್ರಾರಂಭವಾಗುತ್ತದೆ.
74 ದಿನಗಳ ಕಾಲ ನಡೆದ ರಣಭೀಕರ ಯುದ್ದದಲ್ಲಿ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತ ಮತ್ತೆ ತನ್ನ ಗಡಿಯನ್ನು ವಶಕ್ಕೆ ಪಡೆದುಕೊಳ್ಳುತ್ತದೆ. ಯುದ್ಧ ಕೊನೆಯಾಗಿ ಭಾರತೀಯ ಸೈನಿಕರು ಗಡಿಯಲ್ಲಿ ತ್ರಿರಂಗ ಹಾರಿಸಿದ ದಿನವನ್ನು(ಜು.26) 'ಕಾರ್ಗಿಲ್ ವಿಜಯ ದಿವಸ್' ಆಗಿ ದೇಶಾದ್ಯಂತ ಆಚರಿಸಲಾಗುತ್ತದೆ.
ಜಿಲ್ಲೆಯ ಮಾಜಿ ಯೋಧರ ಕಿರು ಪರಿಚಯ:
1. ಮೋಹನ್.ಸಿ: ಇವರು ಶಿವಮೊಗ್ಗ ನಗರದ ಮಲವಗೊಪ್ಪ ಬಡಾವಣೆಯ ನಿವಾಸಿ. ಚನ್ನಯ್ಯ ಹಾಗೂ ಸುಲೋಚನಮ್ಮ ದಂಪತಿಯ ದ್ವಿತೀಯ ಪುತ್ರ. ಇವರು ತಂದೆ ಸಹ ಸೈನ್ಯದಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಮೋಹನ್ ಸಹ 1993ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾದರು. ಮಂಗಳೂರಿನಲ್ಲಿ ನಡೆದ ಸೈನ್ಯದ ರ‍್ಯಾಲಿಯಲ್ಲಿ ಭಾಗಿಯಾಗಿ ನಂತರ ಇವರು ಲಕ್ನೋದಲ್ಲಿ ತರಬೇತಿ ಪಡೆದರು. ಬಳಿಕ ಯೋಧನಾಗಿ ಸೇರ್ಪಡೆಯಾಗುತ್ತಾರೆ.
- ಮೆಡಿಕಲ್ ವಿಭಾಗದಲ್ಲಿ ಕರ್ತವ್ಯ: ಪಂಜಾಬ್ಗೆ ಇವರ ಮೊದಲ ಪೋಸ್ಟಿಂಗ್ ಅಗುತ್ತದೆ. ಅಲ್ಲಿಂದ 1998ರಲ್ಲಿ ಶ್ರೀನಗರಕ್ಕೆ ವರ್ಗಾವಣೆಯಾಗುತ್ತದೆ. ಇಲ್ಲಿ ಇವರು 308 ಫೀಲ್ಡ್ನಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಆ್ಯಂಬುಲೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಲು ನಿಯುಕ್ತರಾಗುತ್ತಾರೆ. ಶ್ರೀನಗರ ಜಿಲ್ಲೆಯ ದ್ರಾಸ್ ವಿಭಾಗದಲ್ಲಿ ಕರ್ತವ್ಯದಲ್ಲಿ ಇರುತ್ತಾರೆ. ಯುದ್ದ ಪ್ರಾರಂಭವಾದಾಗ ಸಹಜವಾಗಿ ಭಾರತೀಯರು ಗಾಯಾಳುಗಳಾಗುತ್ತಾರೆ. ಇವರನ್ನು ಸುರಕ್ಷಿತವಾಗಿ ತಂದು ಚಿಕಿತ್ಸೆ ನೀಡಿ, ಅವರು ಗುಣಮುಖರಾಗುವ ತನಕ ಸೇವೆ ಮಾಡಿದರು.
ಇವರು ಮದ್ರಾಸ್ನಲ್ಲಿ ಸೇವೆಯಲ್ಲಿದ್ದಾಗ ಗುಮರಿಯಲ್ಲಿ ಸೇನೆಯ ಆಸ್ಪತ್ರೆಯೊಂದನ್ನು ತೆರೆಯಲಾಗುತ್ತದೆ. ಯುದ್ದದಲ್ಲಿ ಗಾಯಗೊಂಡವರನ್ನು ಕಣಿವೆ, ಗುಡ್ಡ ಭಾಗದಿಂದ ತಂದು ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೇ ಇವರು ಸೈನ್ಯದ ಹೆಲಿಕ್ಯಾಪ್ಟರ್ಗೆ ಅದು ಹಾರಾಡುವಾಗಲೇ ಗಾಯಾಳುಗಳನ್ನು ಶಿಫ್ಟ್ ಮಾಡುವ ಸಾಹಸದ ಕೆಲಸ ಮಾಡಿದ್ದಾರೆ.
- ಕಾರ್ಗಿಲ್ ವಿಜಯ್ ಪದಕ: ಮೋಹನ್ ಅವರು ಯುದ್ದದಲ್ಲಿ 18 ಗ್ರಾನೈಟರ್ಸ್, 8 ಸಿಖ್, 2 ರಾಜಪೂತ್ ರೈಫಲ್ಸ್ ಹಾಗೂ 17 ಜಮ್ಮು ಕಾಶ್ಮೀರದ ರೈಫಲ್ಸ್ ರಕ್ಷಿಸಿ ಶ್ರೀನಗರದ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ನಂತರ ಇವರಿಗೆ ಯುದ್ದದಲ್ಲಿ ಭಾಗಿಯಾಗಿದ್ದಾರೆ ಎಂದು 'ಕಾರ್ಗಿಲ್ ವಿಜಯ್ ಪದಕ' ಸೇರಿದಂತೆ ತಮ್ಮ ಕರ್ತವ್ಯದಲ್ಲಿ ಅನೇಕ ಪದಕಗಳನ್ನು ಪಡೆದಿದ್ದಾರೆ. 2010ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದು, ಹಾಲಿ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಮೂವರು ಮಕ್ಕಳು. ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದು ನಮ್ಮ ಪುಣ್ಯ. ಅದರಲ್ಲಿಯೂ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ನಡೆದ ಭೀಕರ ಯುದ್ಧದಲ್ಲಿ ಭಾಗಿಯಾಗಿ ದೇಶ ಸೇವೆ ಸಲ್ಲಿಸಿದ ಹೆಮ್ಮೆ ನಮಗಿದೆ ಎನ್ನುತ್ತಾರೆ ಮೋಹನ್.
2.ಹನುಮಂತಪ್ಪ ಸಿ: ಇವರು ಶಿವಮೊಗ್ಗ ಜಿಲ್ಲೆಯವರು. ಹನುಮಂತಪ್ಪ ಅವರು 1986ರ ಅಕ್ಟೋಬರ್ 14ರಂದು ಸೈನ್ಯಕ್ಕೆ ಸೇರ್ಪಡೆಯಾದರು. ಮೊದಲು ಮದ್ರಾಸ್ ರೆಜಿಮೆಂಟ್ನಲ್ಲಿ ಕೆಲಸಕ್ಕೆ ನಿಯುಕ್ತಿಯಾಗುತ್ತಾರೆ. ಇವರು ಸಹ ದೇಶದ ವಿವಿಧೆಡೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಕಾರ್ಗಿಲ್ ಯುದ್ದ ಪ್ರಾರಂಭವಾದಾಗ ಮದ್ರಾದ್ ರೆಜಿಮೆಂಟ್ ಅನ್ನು ಕಾರ್ಗಿಲ್ನ ಕಿರಣ್ ಸೆಕ್ಟರ್ಗೆ ಕಳುಹಿಸುತ್ತಾರೆ. ಅಲ್ಲಿ ಹನುಮಂತಪ್ಪನವರು ಕಿರಣ್ ಸೆಕ್ಟರ್ನಲ್ಲಿ ತಮ್ಮ ಬೆಟಾಲಿಯನ್ ಜೊತೆ ಸೇರಿ ಎಲ್ಓಸಿ( ಲೈನ್ ಆಫ್ ಕಂಟ್ರೋಲ್) ನಲ್ಲಿ ಮೈನ್ಸ್ನಲ್ಲಿ ಅಂದ್ರೆ, ಮೊದಲು ತೆರಳಿ ಯಾವ ಶತ್ರುಗಳು ಇಲ್ಲ ಎಂದು ರಸ್ತೆ ಸಂಚಾರ ಸುಗಮವಾಗಿದೆ ಎಂದು ತಿಳಿಸಿ, ಇನ್ ಫೆಂಟ್ರಿ ಬೆಟಾಲಿಯನ್‌ರವರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಇದರಿಂದ ಇವರ ಉತ್ತಮ ಸೇವೆ ಗಮನಿಸಿ ಭಾರತ ಸರ್ಕಾರ ಕಾರ್ಗಿಲ್ ವಿಜಯ್ ಪದಕ ನೀಡಿ ಗೌರವಿಸಿದೆ.
ಆಳುವವರ ನಿರ್ಲಕ್ಷ್ಯ: ಹನುಮಂತಪ್ಪ ಅವರು 2004ರಲ್ಲಿ ನಿವೃತ್ತಿ ಪಡೆದು ವಾಪಸ್ ಆಗಿ ಎಸ್ಬಿಐ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರು ಸೇವೆಯಿಂದ ನಿವೃತ್ತಿಯಾಗಿ 19 ವರ್ಷ ಕಳೆದರೂ ಸಹ ರಾಜ್ಯ ಸರ್ಕಾರ ಇನ್ನೂ ಒಂದು ತುಂಡು ಭೂಮಿಯನ್ನು ನೀಡಿಲ್ಲ. ಬಗರ್ ಹುಕುಂ ಸಾಗುವಳಿದಾರರು ಮಾಜಿ ಸೈನಿಕರಿಗೆ ನೀಡುವ ಭೂಮಿಯನ್ನು ಕಬಳಿಕೆ ಮಾಡಿಕೊಂಡಿದ್ದಾರೆ. ಇದರಿಂದ ಸರ್ಕಾರದ ನಮಗೆ ಸರಿಯಾದ ಸೂಕ್ತ ಭೂಮಿಯನ್ನು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಇದರಿಂದ ಸರ್ಕಾರ ನಮ್ಮನ್ನು ಇಷ್ಟು ನಿಕೃಷ್ಟವಾಗಿ ಕಾಣುತ್ತದೆ ಎಂದು ತಿಳಿದಿರಲಿಲ್ಲ. ಇಂದಿನ ಪರಿಸ್ಥತಿ ನೋಡಿದರೆ ಯುದ್ಧ ಭೂಮಿಯಲ್ಲಿಯೇ ನಮಗೆ ಸಾವು ಯಾಕೆ ಬರಲಿಲ್ಲ ಎಂದು ಅನಿಸುತ್ತದೆ ಎಂದು ಅಳಲು ತೋಡಿಕೊಂಡರು.
3. ಮಾಲತೇಶಪ್ಪ: ಇವರು ಶಿವಮೊಗ್ಗ ಜಿಲ್ಲೆಯವರು. 1986ರ ಮೇ 13 ರಂದು ಸೈನ್ಯಕ್ಕೆ ಮದ್ರಾಸ್ ರೆಜಿಮೆಂಟ್ನಲ್ಲಿ ಹವಾಲ್ದಾರ್ ಆಗಿ ಸೇರ್ಪಡೆಯಾಗುತ್ತಾರೆ. ಇವರು ಸಹ 1999ರ ಕಾರ್ಗಿಲ್ ನ ಯುದ್ದಲ್ಲಿ ಕಿರಣ್ ಸೆಕ್ಟರ್ಗೆ ನಿಯೋಜನೆಯಾಗುತ್ತಾರೆ. ಇಲ್ಲಿ ಇವರು ಪೆಟ್ರೊಲಿಂಗ್ ಜೊತೆಗೆ, ಆಂಬುಸ್ (ಮುತ್ತಿಗೆ) ಮಾಡುತ್ತಾ ತಮ್ಮ ಬೆಟಾಲಿಯನ್ ಜೊತೆ ಸಂಪರ್ಕ ನೀಡುತ್ತಾ ಸೇವೆ ಸಲ್ಲಿಸಿದ್ದಾರೆ. ನಂತರ ಇವರು ಸುಬೇದಾರ್ ಆಗಿ 2014ರಲ್ಲಿ ನಿವೃತ್ತಿಯಾಗುತ್ತಾರೆ. ಹಾಲಿ ಇವರು ಹೆಚ್ಎಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.