ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿರುವ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಸಮಸ್ಯೆಗಳಿದ್ದು, ಕೂಡಲೇ ಸರಿಪಡಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೆ.ಡಿ.ಪಿ ಸಭೆ(ಕರ್ನಾಟಕ ಅಭಿವೃದ್ದಿ ಕಾರ್ಯಕ್ರಗಳ ಸಭೆ) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸ್ಟೆಲ್‍ಗಳಲ್ಲಿ ಬಿಸಿನೀರು ಒದಗಿಸಲು ಕ್ರಮ ಕೈಗೊಳ್ಳಿ. ಹಾಗೆಯೇ ವಸತಿ ನಿಲಯಗಳು ಸ್ವಚ್ಚವಾಗಿರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡಿ, ಶಿವಮೊಗ್ಗ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಫಲಾನುಭವಿಯೊಬ್ಬರಿಗೆ ಆಶ್ರಯ ಯೋಜನೆಯಡಿ ನಿರ್ಮಿಸಿಕೊಡಲಾಗಿರುವ ಮನೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಮಳೆಯಿಂದಾಗಿ ನೆಲಕಚ್ಚಿ ಹೋಗಿದೆ. ಈ ಮನೆಯ ನಿರ್ಮಾಣಕ್ಕೆ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಮನೆಯ ದುರಸ್ತಿಯಾಗುವವರೆಗೆ ಹಣ ಪಾವತಿಸಬಾರದು. ಜಿಲ್ಲೆಯ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಗಳು ಸಾವನ್ನಪ್ಪುತ್ತಿರುವ ಮಾಹಿತಿ ಇದೆ. ಕಳೆದ ಸಾಲಿನಲ್ಲಿ ಆದಂತಹ ಸಾವು-ನೋವುಗಳು, ಅಹಿತಕರ ಘಟನೆಗಳು ಮರುಕಳಿಸದಂತೆ ಆರೋಗ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಮಂಗನ ಕಾಯಿಲೆಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ 47,474 ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ, ಆನ್‍ಲೈನ್‍ನಲ್ಲಿ ಉನ್ನತೀಕರಿಸಲಾಗಿದೆ. ಆ ಪೈಕಿ 16,000 ಅರ್ಜಿದಾರರಿಗೆ 14 ಕೋಟಿ ರೂ ಸಹಾಯ ಧನ ವಿತರಿಸಲಾಗಿದೆ. ಉಳಿದಂತಹ ಅರ್ಜಿಗಳ ಫಲಾನುಭವಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.