ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿಯ ನಿಮಜ್ಜನವನ್ನು ಸರಳವಾಗಿ ನೆರವೇರಿಸಲಾಯಿತು. ಸರ್ಕಾರದ ಸೂಚನೆ ಹಿನ್ನೆಲೆ ಈ ಭಾರಿ ಮೆರವಣಿಗೆ ನಡೆಸದೆ ನಿಮಜ್ಜನ ನಡೆದಿದೆ.
ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆ ಮಾಡುವ ಹಿಂದೂ ಮಹಾಸಭಾ ಗಣಪತಿಗೆ 77 ವರ್ಷಗಳ ಇತಿಹಾಸವಿದೆ. ಅಲ್ಲದೇ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಎಂದರೆ ಸಾಕು ಇಡೀ ರಾಜ್ಯವೇ ತಿರುಗಿ ನೋಡುವಂತಹ ಮೆರವಣಿಗೆ ನಡೆಯುತ್ತಿತ್ತು. ಆದರೆ ಕಳೆದೆರೆಡು ವರ್ಷಗಳಿಂದ ಕೋವಿಡ್ ಇರುವ ಹಿನ್ನೆಲೆಯಲ್ಲಿ ಯಾವುದೇ ಮೆರವಣಿಗೆ ಇಲ್ಲದೆ ಅತ್ಯಂತ ಸರಳವಾಗಿ ನಿಮಜ್ಜನ ಮಾಡಲಾಗುತ್ತಿದೆ.
ಈ ಬಾರಿ ಕೂಡ ಸರ್ಕಾರದ ಮಾರ್ಗಸೂಚಿಯಂತೆ ತುಂಗಾನದಿಯ ಭೀಮನ ಮಡುವಿನಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ನಿಮಜ್ಜನ ಮಾಡಲಾಯಿತು. ನಿಮಜ್ಜನ ಪೂರ್ವದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ಶ್ರೀರಾಮನ ಘೋಷಣೆ ಕೂಗಲಾಯಿತು.