ಶಿವಮೊಗ್ಗ: ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಲೋಪದೋಷಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ತನಿಖೆ ನಡೆಸಿ15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಸ್ಥಳೀಯವಾಗಿ ರಚಿಸಲಾಗುವುದು. ಈ ಸಮಿತಿಗೆ ಎಲ್ಲ ಮಾಹಿತಿಯನ್ನು ತಕ್ಷಣ ಒದಗಿಸಬೇಕು. ಸಮಿತಿ ಪರಿಶೀಲನೆ ನಡೆಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಅಗತ್ಯ ಬಿದ್ದರೆ ಹೆಚ್ಚಿನ ತನಿಖೆ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.
ಯೋಜನೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾಮಗಾರಿ ಕೈಗೊಳ್ಳಲಾಗಿದ್ದು, ಗುತ್ತಿಗೆದಾರನಿಗೆ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ. ಫೀಡರ್ಗಳಲ್ಲಿ ಅಳವಡಿಸಿರುವ ಕಂಬಗಳ ಬಗ್ಗೆಯೂ ಸರಿಯಾದ ಲೆಕ್ಕ ಇಲ್ಲ. ಪ್ರತಿ ಕಂಬಗಳಿಗೆ ಸಂಖ್ಯೆಯನ್ನು ಸಹ ನಮೂದಿಸಿರುವುದಿಲ್ಲ. ಜೊತೆಗೆ ಕಾಮಗಾರಿ ಆರಂಭಕ್ಕಿಂತ ಮೊದಲು ಗುತ್ತಿಗೆದಾರನೊಂದಿಗೆ ಬಾಂಡ್ ಬರೆಸಿಕೊಂಡಿಲ್ಲ. 2019 ರಿಂದ ಜಿಲ್ಲೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದ್ದು, ಮೂಲ ಕ್ರಿಯಾ ಯೋಜನೆಯನ್ನು ಉಲ್ಲಂಘಿಸಿ ಕಾಮಗಾರಿ ಅನುಷ್ಠಾನಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಗುತ್ತಿಗೆದಾರನಿಂದ ಸರಿಪಡಿಸಿಕೊಳ್ಳಬೇಕು. ಗುತ್ತಿಗೆದಾರನಿಗೆ ಪಾವತಿಯಾಗಿರುವ ಹಣವನ್ನು ವಸೂಲು ಮಾಡಿ, ಲೋಪದೋಷಗಳನ್ನು ಕಾನೂನು ಪ್ರಕಾರ ಸರಿಪಡಿಸಬೇಕು. ಮೆಸ್ಕಾಂ ವ್ಯಾಪ್ತಿಯ ಇತರೆ ಜಿಲ್ಲೆಗಳಲ್ಲಿ ನಡೆದಿರುವ ಯೋಜನೆ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮೆಸ್ಕಾಂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.