ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿದೆ. ಹೀಗಿರುವಾಗ ಮಾಸ್ಕ್ ಹಾಕಿಸುವುದು, ಅಂಗಡಿ ಬಂದ್ ಮಾಡಿಸುವುದನ್ನ ಮಾತ್ರ ಜಿಲ್ಲಾಡಳಿತ ಮಾಡುತ್ತಿದೆ ಹೊರತು ಕೊರೊನಾ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ
ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೋ ಎನ್ನುವುದೇ ಗೊತ್ತಿಲ್ಲ, ಕೇವಲ ಮಾತೆತ್ತಿದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ ಹೊರತು ಕೊರೊನಾ ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಈಶ್ವರಪ್ಪನವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮಾಹಿತಿ ನೀಡದೇ ಲಾಕ್ ಡೌನ್ ಮಾಡಿದೆ
ಸರ್ಕಾರ ಸರಿಯಾದ ಮಾಹಿತಿ ನೀಡದೇ ಲಾಕ್ ಡೌನ್ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅಷ್ಟೇ ಅಲ್ಲದೆ ಕೊರೊನಾ ಸೋಂಕು ಹೆಚ್ಚಾಗಿರುವ ಬೆಂಗಳೂರಿನಿಂದ ಬರುವರರನ್ನು ತಡೆಗಟ್ಟದೇ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುವಂತೆ ಮಾಡುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಸಂಬಂಧಿಕರದ್ದೇ ಹೆಚ್ಚು ಆಸ್ಪತ್ರೆಗಳಿವೆ
ಇನ್ನು ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಸರ್ಕಾರ ಕೂಡಲೇ ಖಾಸಗಿ ಆಸ್ಪತ್ರೆಗಳಿಂದ ಶೇಕಡಾ 50ರಷ್ಟು ಬೇಡ್ ಗಳನ್ನ ಪಡೆಯಬೇಕು. ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಂಬಂಧಿಕರದ್ದೇ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಅಧಿಕಾರ ಬಳಸಿಕೊಂಡು ಬೆಡ್ ಸಿಗದಂತೆ ಮಾಡಬಹುದು. ಈ ಕೂಡಲೇ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್ಗಳನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.