ಶಿವಮೊಗ್ಗ : ನಗರದ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಜೇನು ದಾಳಿ ಮಾಡಿರುವ ಘಟನೆ ನಡೆದಿದೆ. ಐವರು ವಿದ್ಯಾರ್ಥಿಗಳ ಮೇಲೆ ಹಾಗೂ 12 ಮಂದಿ ಪೋಷಕರ ಮೇಲೆ ಜೇನು ಹುಳಗಳು ದಾಳಿ ನಡೆಸಿವೆ. ವಿದ್ಯಾರ್ಥಿಗಳಿಗೆ ಪರೀಕ್ಷ ಕೇಂದ್ರದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಸಮಯ ತಡವಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲು ಡಿಡಿಪಿಐ ಸೂಚನೆ ನೀಡಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಪರೀಕ್ಷೆ ಬರೆಯುತ್ತಿದ್ದಾರೆ. ಪೋಷಕರು ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಂಜೀವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಜೇನುದಾಳಿಯಾದ ಶಾಲೆಯ ಬಳಿಯೇ ವೈದ್ಯಕೀಯ ಸಿಬ್ಬಂದಿಯನ್ನ ನೇಮಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ವಾಹಿನಿಯ ಕ್ಯಾಮೆರಾಮೆನ್‌ಗೂ ಸಹ ಜೇನು ದಾಳಿ ನಡೆಸಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಾಲೆಯ ಬಳಿ ಜೇನು ಗೂಡು ಕಟ್ಟಿಕೊಂಡಿದ್ದು, ಅದನ್ನು ತೆಗೆಯಲು ಸೂಚಿಸಿರುವುದಾಗಿ ಡಿಡಿಪಿಐ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 94 ಪರೀಕ್ಷೆ ಕೇಂದ್ರದಲ್ಲಿ 24,370 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದ ಕಸ್ತೂರಿ ಬಾ ಬಾಲಕಿಯ ಶಾಲೆಯಲ್ಲಿ ಓರ್ವ ವಿದ್ಯಾರ್ಥಿನಿ ಹಿಜಾಬ್ ತೆಗೆಯದೆ ಪರೀಕ್ಷೆ ಬರೆಯುವುದಿಲ್ಲ ಎಂದು ವಾಪಸ್ ಹೋಗಿ ಪುನಾಃ ಬಂದು ಪರೀಕ್ಷೆಗೆ ಹಾಜರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿಯೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಹೂ ನೀಡಿದ ಸ್ವಾಗತಿಸಿದ ಬಿಜೆಪಿ ಶಾಸಕ ಅನಿಲ್ ಬೆನಕೆ!