ಶಿವಮೊಗ್ಗ: ಪಂಚಾಯತ್ ರಾಜ್ ದಿವಸ್ ಆಚರಿಸುವ ಸಲುವಾಗಿ ಏಪ್ರಿಲ್ 24ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಗ್ರಾಮವನ್ನು ಸಜ್ಜುಗೊಳಿಸಲಾಗುತ್ತಿದೆ. ಪ್ರಧಾನಿ ಬರಲು ಒಂದೂವರೆ ತಿಂಗಳು ಬಾಕಿ ಇದ್ದು, ಕೆಲ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲಾಡಳಿತ ಪ್ರತಿ ಕಾಮಗಾರಿಗಳನ್ನು ಮುತುವರ್ಜಿಯಿಂದ ನಡೆಸುತ್ತಿದೆ.
ಹೊಳಲೂರು ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದೆ. ಹಾಲಿ ಗ್ರಾಮವನ್ನು ಹೈಟೆಕ್ ಗ್ರಾಮವನ್ನಾಗಿ ಮಾರ್ಪಡಿಸಲಾಗುತ್ತಿದೆ. ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ, ಕಸ ವಿಲೇವಾರಿ ಘಟಕ, ಜಲ ಜೀವನ್ ಯೋಜನೆ ಕಾಮಗಾರಿ, ಇಂಗುಗುಂಡಿ, ಶೌಚಾಲಯ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಭರದಿಂದ ನಡೆಸಲಾಗುತ್ತಿದೆ.
ಹೊಳಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜೊತೆಗೆ ಭಾರತೀಯ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ದೂರವಾಣಿ ಸಂಪರ್ಕ ಕೇಂದ್ರ, ಪಶು ವೈದ್ಯಕೀಯ ಕೇಂದ್ರ, ಸರ್ಕಾರಿ ಶಾಲೆಗಳು, ಡಿಜಿಟಲ್ ಗ್ರಂಥಾಲಯ, ಸಂತೆ ಮಾರುಕಟ್ಟೆ ಸೇರಿದಂತೆ ಎಲ್ಲ ಸೌಲಭ್ಯಗಳು ಲಭ್ಯವಿದೆ. ಈ ಎಲ್ಲ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ಅಲ್ಲದೇ ಆಯಾ ಇಲಾಖೆಯ ಕಂಪೌಂಡ್ಗಳಲ್ಲಿ ಇಲಾಖೆಯ ಕಾಮಗಾರಿ, ಪ್ರಗತಿಯ ಕುರಿತು ಚಿತ್ರಿಸಲಾಗುತ್ತಿದೆ. ಇದರಿಂದ ಕಂಪೌಂಡ್ ಅಂದವಾಗಿ ಕಾಣಿಸುತ್ತಿದೆ.
ಇದನ್ನೂ ಓದಿ: ದುಗ್ಗಮ್ಮ ದೇವಿ ಜಾತ್ರೆ ಹಿನ್ನೆಲೆ: ಜಿಲ್ಲಾಡಳಿತದ ಆದೇಶ ಮೀರಿ ಪ್ರಾಣಿವಧೆ ಮಾಡಿದ ಯುವಕರು
ಇನ್ನೂ ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಜನ ಸದಸ್ಯರ ಪೈಕಿ 6 ಮಹಿಳಾ ಸದಸ್ಯರು, 5 ಪುರುಷ ಸದಸ್ಯರು ಇದ್ದಾರೆ. ಅಲ್ಪ ಸಂಖ್ಯಾತ ಸಮುದಾಯದವರು ಅಧ್ಯಕ್ಷರಾಗಿದ್ದಾರೆ. ಗ್ರಾಮದ ಹೊರ ಭಾಗದಲ್ಲಿನ 15 ಎಕರೆ ಜಾಗದಲ್ಲಿ ಪ್ರಧಾನಿ ಮೋದಿ ಅವರು ಗ್ರಾಮ ಪಂಚಾಯಿತಿಯ ಕಾರ್ಯ ವೈಖರಿಯ ಬಗ್ಗೆ ಅಂದು ಮಾತನಾಡಲಿದ್ದಾರೆ. ಇಲ್ಲಿಂದ ದೇಶಕ್ಕೆ ಸಂದೇಶವನ್ನು ಕಳುಹಿಸಲಾಗುತ್ತದೆ. 15 ಎಕರೆ ಜಾಗದಲ್ಲಿ 5 ಎಕರೆಯಲ್ಲಿ ಹೆಲಿಪ್ಯಾಡ್ ಮಾಡಲಾಗುತ್ತದೆ. ಉಳಿದ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತದೆ.
ಒಟ್ಟಾರೆ ಪ್ರಧಾನಿ ಮೋದಿ ಅವರು ಹೊಳಲೂರಿಗೆ ಆಗಮಿಸುತ್ತಿರುವುದರಿಂದ ಹತ್ತಾರು ವರ್ಷಗಳ ನಂತರ ಇಲ್ಲಿನ ಸರ್ಕಾರಿ ಕಚೇರಿಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದೆ. ನಮ್ಮ ಅವಧಿಯಲ್ಲಿ ಪ್ರಧಾನಿ ಮೋದಿಯವರು ಆಗಮಿಸುತ್ತಿರುವುದು ಹಾಗೂ ಇಷ್ಟೊಂದು ಕಾಮಗಾರಿ ನಡೆಯುತ್ತಿರುವುದಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.