ಶಿವಮೊಗ್ಗ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ v/s ಕೇಸರಿ ಶಾಲ್ ವಿವಾದ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆದುಕೊಳ್ಳಲು ಶುರು ಮಾಡಿದೆ. ಇದೇ ವಿಚಾರವಾಗಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮಾತನಾಡಿದ್ದು, ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಸಂವಿಧಾನದ ಹಕ್ಕು. ನಮಗೆ ಹಿಜಾಬ್ ಬೇಕೆಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.
ಹಿಜಾಬ್ ಅನ್ನು ಈಗಲ್ಲ, ಇಸ್ಲಾಂ ಧರ್ಮ ಪ್ರಾರಂಭವಾದಾಗಿನಿಂದಲೂ ಸಹ ಧರಿಸಿಕೊಂಡು ಬರುತ್ತಿದ್ದೇವೆ. ಹಿಜಾಬ್ ಧರಿಸುವುದು ನಮ್ಮ ಸಂವಿಧಾನದ ಹಕ್ಕು, ಈ ಹಕ್ಕನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಆಗ್ರಹಿಸಿದ್ದಾರೆ.
ಹಿಜಾಬ್ ಅನ್ನು ನಾವು ಸಣ್ಣ ವಯಸ್ಸಿನಿಂದಲೂ ಹಾಕಿಕೊಂಡು ಬರುತ್ತಿದ್ದೇವೆ. ಆಗ ಇಲ್ಲದ ತಕರಾರು ಈಗ ಯಾಕೆ ಬಂದಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಹಾಕಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಹೇಳಿದೆ? ಸಂವಿಧಾನದಲ್ಲಿ ಮೂಲಭೂತವಾದ ಸಮಾನತೆಯ ಹಕ್ಕು ಇದೆ. ಆದರೆ, ಈಗ ಸಮಾನತೆ ಎಲ್ಲಿದೆ? ಹಿಜಾಬ್ ನಮ್ಮ ಸಂವಿಧಾನದ ಹಕ್ಕು. ಹಿಜಾಬ್ ನಮಗೆ ಬೇಕೆ ಬೇಕು. ನಮಗೆ ಶಿಕ್ಷಣದಷ್ಟೆ ಹಿಜಾಬ್ ಮುಖ್ಯವಾಗಿದೆ ಎಂದು ಡಿವಿಎಸ್ ಕಾಲೇಜಿನ ದ್ವೀತಿಯ ಪದವಿ ವಿದ್ಯಾರ್ಥಿನಿ ಜವೇರಿಯಾ ತಿಳಿಸಿದ್ದಾರೆ.
ಇದನ್ನೂ ಓದಿರಿ: ಫೆ. 12ರ ಬದಲು ಫೆ. 24ಕ್ಕೆ ಧರ್ಮಸ್ಥಳಕ್ಕೆ ಹೋಗಲು ಸಿದ್ಧ... ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ
ಉಡುಪಿ ಭಾಗದಲ್ಲಿ ಉದ್ಭವಗೊಂಡಿರುವ ಹಿಜಾಬ್ ರಂಪಾಟ ಈಗ ನಮ್ಮಲ್ಲೂ ಪ್ರಾರಂಭಿಸಿದ್ದಾರೆ. ಹಿಜಾಬ್ ಧರಿಸಿ ನಾವು ಕಾಲೇಜುಗಳಿಗೆ ಬಂದರೆ ಏನಾಗುತ್ತದೆ? ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ನಮಗೆ ನಮ್ಮ ಸಂವಿಧಾನ ನೀಡಿರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಶಾಲಾ ಕಾಲೇಜಿನಲ್ಲಿ ಕೃಷ್ಣಾಷ್ಟಮಿ ಆಚರಣೆ ಮಾಡಿದಾಗ ನಾವು ವಿರೋಧ ಮಾಡಲಿಲ್ಲ. ಈಗ ನಮ್ಮ ಧರ್ಮದ ಆಚರಣೆಗೆ ಯಾಕೆ ವಿರೋಧ ಮಾಡ್ತಾ ಇದ್ದಿರಿ? ಎಂದು ವಿದ್ಯಾರ್ಥಿನಿ ಸಾನಿಯಾ ಪ್ರಶ್ನಿಸಿದ್ದಾರೆ.
ಇನ್ನೂ ನಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಓದಿಸಲು ಕಳುಹಿಸುತ್ತೆವೆ. ಆದರೆ, ಅಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಈ ರೀತಿ ಅಪಮಾನ ಮಾಡುವುದು ಸರಿ ಅಲ್ಲ. ಮುಸ್ಲಿಂ ಹೆಣ್ಣು ಮಕ್ಕಳನ್ನು ಇತ್ತೀಚಿನ ದಿನಗಳಲ್ಲಿ ಕಾಲೇಜಿಗೆ ಕಳುಹಿಸಲಾಗುತ್ತದೆ. ಆದರೆ, ಅವರ ಶಿಕ್ಷಣಕ್ಕೆ ತಡೆಯೊಡ್ಡಲು ಈ ರೀತಿ ಮಾಡಲಾಗುತ್ತಿದೆ. ಭಾರತದ ಸಂವಿಧಾನದಲ್ಲಿ ಯಾವುದಾದರೂ ಧರ್ಮವನ್ನು ಅನುಸರಿಸುವ ಹಕ್ಕನ್ನು ನೀಡಿದೆ. ಅದೇ ರೀತಿ ಬಟ್ಟೆಯನ್ನು ಸಹ ಧರಿಸುವ ಹಕ್ಕನ್ನು ನೀಡಿದೆ. ಈಗ ಶಿವಮೊಗ್ಗದಲ್ಲಿ ನಡೆಯುತ್ತಿರುವ ಘಟನೆ ಖಂಡನೀಯವಾಗಿದೆ. ಇದರಿಂದ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ. ಇಂದು ಕಾಲೇಜಿನಲ್ಲಿ ನಡೆದ ಘಟನೆಯು ಅವಶ್ಯಕತೆಯಾಗಿತ್ತೆ ಎಂದು ಗೃಹಿಣಿ ಬೇಬಿ ಜೈಸುಲ್ ಪ್ರಶ್ನೆ ಮಾಡಿದ್ದಾರೆ. ಈ ರೀತಿಯ ಘಟನೆಗಳಿಂದ ನಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಭಯವಾಗುತ್ತದೆ ಎಂದು ತಿಳಿಸಿದ್ದಾರೆ.