ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಲಾಲ್ ಕಟ್ ವಿವಾದ ಮುಂದುವರಿದಿದೆ. ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಈ ಸಂಬಂಧ ಗಲಾಟೆ ಸಹ ನಡೆದಿದ್ದು, ಎರಡು ಪ್ರಕರಣಗಳು ದಾಖಲಾಗಿವೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯರು ಎನ್ನಲಾದ ಯುವಕರ ಗುಂಪೊಂದು ಹೊಸಮನೆ ಬಡಾವಣೆಯ ಮಟನ್ ಅಂಗಡಿಗೆ ಹೋಗಿ ನಮಗೆ ಹಲಾಲ್ ಮಾಡದ ಮಟನ್ ನೀಡಬೇಕು ಎಂದು ಆಗ್ರಹಿಸಿದಾಗ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಇಲ್ಲಿ ಶೇ.99 ರಷ್ಟು ಮಂದಿ ಹಿಂದೂಗಳಿದ್ದಾರೆ. ಹಾಗಾಗಿ ಇನ್ನು ಮುಂದೆ ಹಲಾಲ್ ಮಾಡದ ಮಟನ್ ನೀಡಬೇಕು ಎಂದು ಕೆಲವರು ನಿಂದಿಸಿದ್ದಾರೆ ಎಂದು ಹೇಳಲಾಗ್ತಿದೆ. ಈ ಕುರಿತು ಮಟನ್ ಅಂಗಡಿಯವರು ಹೊಸಮನೆ ಪೊಲೀಸ್ ಠಾಣೆಯಲ್ಲಿ ತನ್ನ ಅಂಗಡಿಗೆ ಬಂದವರು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಹೋಟೆಲ್ಗೆ ಹೋದ ಯುವಕರ ತಂಡ ಇನ್ನು ಮುಂದೆ ಹಲಾಲ್ ಕಟ್ ಮಾಡಿದ ಮಟನ್ ಊಟ ಸಿಗಬಾರದು. ಜಟ್ಕಾ ಕಟ್ ಮಾಡಿದ ಮಟನ್ ಊಟವೇ ಸಿಗಬೇಕು ಎಂದು ಹೇಳುತ್ತಿದ್ದಂತೆಯೇ ಹೋಟೆಲ್ನಲ್ಲಿದ್ದ ಗ್ರಾಹಕನೋರ್ವನ ಜತೆ ಜಗಳವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಏಳು ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಲಾಲ್ ವಿರುದ್ಧ ಕ್ಯಾಂಪೇನ್.. ಕೆರೆಹಳ್ಳಿ, ಸಂಬರ್ಗಿ, ಕಾಳಿಸ್ವಾಮಿ ವಿರುದ್ಧ ಕಮಿಷನರ್ ಪಂತ್ಗೆ ವಕೀಲರ ನಿಯೋಗದಿಂದ ದೂರು..