ಶಿವಮೊಗ್ಗ /ರಾಣೆಬೆನ್ನೂರ : ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಮಾಡಿದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಹಾಗೂ ರಾಣೆಬೆನ್ನೂರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಜೋರಾಗಿವೆ.
ರಾಣೆಬೆನ್ನೂರ ತಾಲೂಕಿನಲ್ಲಿ ಒಟ್ಟು 40 ಗ್ರಾಪಂ ಪೈಕಿ ಸದ್ಯ 33 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಪ್ರಮುಖ ಎರಡು ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ. ರಾಣೆಬೆನ್ನೂರ ತಾಲೂಕಿನ ಒಟ್ಟು 33 ಗ್ರಾಮ ಪಂಚಾಯತಗಳಿಗೆ ನ.22ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.
ಮತದಾನಕ್ಕಾಗಿ 236 ಮತಗಟ್ಟೆ ಗುರುತಿಸಲಾಗಿದೆ. ಅವುಗಳಲ್ಲಿ 37 ಸೂಕ್ಷ್ಮ ಮತಗಟ್ಟೆಗಳಾಗಿವೆ. ಇನ್ನುಳಿದ 176 ಮತಗಟ್ಟೆಗಳು ಸಾಮಾನ್ಯವಾಗಿವೆ.
ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಉಪವಿಭಾಗದ 40 ಗ್ರಾಮ ಪಂಚಾಯತ್, ಭದ್ರಾವತಿ 35 ಮತ್ತು ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್‌ಗಳಿಗೆ ಮೊದಲ ಹಂತದಲ್ಲಿ ಡಿಸೆಂಬರ್ 22 ರಂದು ಚುನಾವಣೆ ನಡೆಯಲಿದೆ.
ಸಾಗರ ಉಪ ವಿಭಾಗದ ಸಾಗರ 27, ಶಿಕಾರಿಪುರ 39, ಸೊರಬ 35 ಮತ್ತು ಹೊಸನಗರದ 30 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ ಎಂದರು. ಜಿಲ್ಲೆಯ 271 ಗ್ರಾಪಂ ಪೈಕಿ 244 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.
ಇನ್ನುಳಿದಂತೆ 7 ಗ್ರಾಪಂ 5 ವರ್ಷದ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲ. ಕುಂಸಿ, ಪುರದಾಳು, ಕೋಮಾರನಹಳ್ಳಿ, ವೀರಾಪುರ, ಹಾರೋಗೊಪ್ಪ, ತರಲಘಟ್ಟ ಮತ್ತು ಚುರ್ಚಿಗುಂಡಿ ಗ್ರಾಪಂ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಡಿಸೆಂಬರ್ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಪಂ, ಪುರಸಭೆ, ನಗರಸಭೆ, ನಗರಪಾಲಿಕೆ ಮತ್ತು ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.
ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟಗಳಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉಪಸ್ಥಿತರಿದ್ದರು.