ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿರುವ ವಿಕಲಾಂಗರಿಗೆ ದೊರೆಯಬಹುದಾದ ಸೇವೆ-ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತೆ ಜಿಲ್ಲಾಧಿಕಾರಿ ಜಿ.ಅನುರಾಧ ಸಲಹೆ ನೀಡಿದ್ದಾರೆ.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿದ ಅವರು. ಅಂಗವಿಕಲತೆ ದೈಹಿಕ ನ್ಯೂನತೆಯಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಸಮಾಜದಲ್ಲಿ ಸದೃಢರಾಗಿ ಬದುಕುವುದನ್ನು ಕಲಿಯಬೇಕು. ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕುಟುಂಬದ ಸದಸ್ಯರು ವಿಕಲಾಂಗರಿಗೆ ನೆರವಾಗಬೇಕು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿಕಲಾಂಗರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿರುವುದು ಹರ್ಷದ ಸಂಗತಿ. ಒಟ್ಟಾರೆಯಾಗಿ ಅಂಗವಿಕಲತೆಯನ್ನು ಶಾಪವೆಂದು ಪರಿಗಣಿಸದೇ ಸವಾಲಾಗಿ ಸ್ವೀಕರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಗಮನಹರಿಸಬೇಕೆಂದು ತಿಳಿಸಿದರು..