ಶಿವಮೊಗ್ಗ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ತಜ್ಞರ ಸಲಹೆ ಸೂಚನೆಗಳನ್ನು ಆಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿ ಹಬ್ಬ ಆಚರಣೆಗೆ ಎಂದು ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಕೊನೆಯ ಹಂತದಲ್ಲಿ ಹಬ್ಬಕ್ಕೆ ಅವಕಾಶ ನೀಡಿದ್ದರ ಪರಿಣಾಮವಾಗಿ ಗಣೇಶ ಮೂರ್ತಿ ಮಾಡುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಕೋವಿಡ್ ಮೂರನೇ ಅಲೆಗೆ ಕಡಿವಾಣ ಹಾಕುವ ಸಲುವಾಗಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಜ್ಞರ ವರದಿ ಆಧರಿಸಿ ಕೆಲವು ನಿರ್ಬಂಧಗಳನ್ನು ಮಾಡಿ ರಾಜ್ಯ ಸರ್ಕಾರ ಕಳೆದ ಸೆಪ್ಟಂಬರ್ 5 ರಂದು ಹಬ್ಬಗಳ ಆಚರಣೆಗೆ ಅನುಮತಿ ನೀಡಿತ್ತು. ಆದರೆ, ಗಣೇಶ ಹಬ್ಬಕ್ಕೆ 5 ದಿನ ಮಾತ್ರ ಬಾಕಿ ಇರುವಾಗ ಸರ್ಕಾರ ಅನುಮತಿ ನೀಡಿದ್ದರಿಂದಾಗಿ ಗಣೇಶ ಮೂರ್ತಿ ತಯಾರು ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
5 ದಿನಗಳ ಕಾಲ ಹಬ್ಬದ ಆಚರಣೆಗೆ ಕಾಲಾವಕಾಶ
ವರ್ಷಪೂರ್ತಿ ಇದೇ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದವರ ಸ್ಥಿತಿ ಇಂದು ಅಯೋಮಯವಾಗಿದೆ. ಕಳೆದ ವರ್ಷ ನೂರಾರು ಗಣೇಶ ವಿಗ್ರಹಗಳನ್ನು ಮಾಡಿಕೊಂಡಿದ್ದ ಮೂರ್ತಿ ತಯಾರಕರು, ಸರ್ಕಾರ ಒಂದು ದಿನಕ್ಕೆ ಹಬ್ಬ ಸೀಮಿತಗೊಳಿಸಿದ್ದರ ಪರಿಣಾಮವಾಗಿ ತೀವ್ರ ನಷ್ಟ ಅನುಭವಿಸಿದ್ದರು. ಈ ಬಾರಿ ಸರ್ಕಾರ 5 ದಿನಗಳ ಕಾಲ ಹಬ್ಬಕ್ಕೆ ಅವಕಾಶ ನೀಡಿದೆ. ಆದರೆ, ಕೊನೆಯ ಹಂತದಲ್ಲಿ ನೀಡಿದ್ದರ ಪರಿಣಾಮವಾಗಿ ಬೇಡಿಕೆ ಬಂದರೂ ಮೂರ್ತಿ ತಯಾರಿಸಿ ಕೊಡಲಾಗದ ಸ್ಥಿತಿಗೆ ಮೂರ್ತಿ ತಯಾರಿಸುವ ಕುಟುಂಬಗಳು ತಲುಪಿವೆ.
ಇನ್ನೂ ಶಿವಮೊಗ್ಗ ನಗರದ ಕುಂಬಾರಗುಂಡಿ ಬೀದಿಯಲ್ಲೇ ಹಲವು ಕುಟುಂಬಗಳು ಐದಾರು ದಶಕಗಳಿಂದ ವಿವಿಧ ನಮೂನೆಯ ಮಣ್ಣಿನ ಗಣಪತಿಗಳನ್ನ ಮಾಡುತ್ತಾ ಬದುಕು ಕಟ್ಟಿಕೊಂಡಿವೆ. ವರ್ಷವಿಡೀ ಗಣಪತಿ ತಯಾರಿ ಕೆಲಸದಲ್ಲೇ ನಿರತರಾಗಿರುತ್ತಿದ್ದ ಈ ಕುಟುಂಬಗಳಿಗೆ ತಲೆಮಾರಿನಿಂದಲೂ ಈ ಕಸುಬು ಜೀವನಾಧಾರವಾಗಿದೆ.
ಕಳೆದ ಮೂರು ವರ್ಷಗಳಿಂದ ಶಿವಮೊಗ್ಗದ ಕುಂಬಾರಗುಂಡಿ ಭಾಗದಲ್ಲಿ ತುಂಗಾನದಿಯ ಪ್ರವಾಹದಿಂದ ಈ ಕುಟುಂಬಗಳು ಸಂಕಷ್ಟ ಅನುಭವಿಸಿದ್ದು, ಅದಕ್ಕೂ ಸಹ ಸರ್ಕಾರದಿಂದ ಸೂಕ್ತ ಪರಿಹಾರ ಈವರೆಗೆ ದೊರಕಿಲ್ಲ. ಇದರ ನಡುವೆ ಕಳೆದ ಎರಡು ವರ್ಷಗಳಿಂದ ಪ್ರವಾಹದ ಜೊತೆಗೆ ಕರೋನಾ ಸಹ ತನ್ನ ಕರಿನೆರಳು ಬೀರಿದೆ. ಹೀಗಾಗಿ ಈ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ನೆರವಿನ ಭರವಸೆಯಲ್ಲಿ ದಿನ ದೂಡುತ್ತಿದ್ದಾರೆ.