ಶಿವಮೊಗ್ಗ: ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗಕ್ಕೆ ನಡೆಯುತ್ತಿರುವ ಭೂ ಸ್ವಾಧೀನ ವಿರೋಧಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಹೊಸ ರೈಲು ಮಾರ್ಗ ಶಿವಮೊಗ್ಗ-ಶಿಕಾರಿಪುರದಿಂದ ರಾಣೆಬೆನ್ನೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ ಜಿಲ್ಲೆ ನ್ಯಾಮತಿ ಹಾಗೂ ರಾಣೆಬೆನ್ನೂರಿನ ಹಲವು ಗ್ರಾಮಗಳ ಮೂಲಕ ರೈಲು ಮಾರ್ಗ ಹಾದು ಹೋಗುತ್ತದೆ. ರೈಲು ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೆಐಎಡಿಬಿ ನಡೆಸುತ್ತಿದೆ. ಈಗಾಗಲೇ ರೈತರೂಂದಿಗೆ ಡಿಸಿ ಮಾತನಾಡಿ, ಗ್ರಾಮಗಳ ಮೇಲೆ ಭೂ ದರ ನಿಗದಿಯಂತೆ ಎಕರೆಗೆ 6 ಲಕ್ಷದಿಂದ 14 ಲಕ್ಷದವರೆಗೂ ಹಣ ನೀಡುವುದಾಗಿ ತಿಳಿಸಿದ್ದಾರೆ. ಈಗ ಭೂ ಸ್ವಾಧಿನ ಮಾಡಿಕೊಂಡ ಭೂಮಿಯು ಜಮೀನಿನ ಮಧ್ಯ ಭಾಗದಲ್ಲಿ ಹಾದು ಹೋಗುತ್ತದೆ. ಇದರಿಂದ ರೈಲು ಹಳಿಯ ಅಕ್ಕ-ಪಕ್ಕದಲ್ಲಿ ತುಂಡು ಭೂಮಿ ಉಳಿಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ರೈತರು ಬೀದಿಪಾಲಾಗುತ್ತಾರೆ. ಇದಕ್ಕೆ ರೈತರು ಬೇರೆ ಮಾರ್ಗದಲ್ಲಿ ರೈಲನ್ನು ತೆಗೆದುಕೊಂಡು ಹೋಗುವಂತೆ ಆಗ್ರಹಿಸಿದ್ದಾರೆ. ಬಲವಂತವಾಗಿ ನಮ್ಮ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳಲು ಯತ್ನ ಮಾಡುತ್ತಿದೆ. ಒಂದು ವೇಳೆ ರೈತರ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಲು ಒತ್ತಾಯ ಮಾಡಿದ್ರೆ, ಸರ್ಕಾರ ಪ್ರತಿ ಎಕರೆ ಭೂಮಿಗೆ 1 ಕೋಟಿ 25 ಲಕ್ಷ ರೂ. ನೀಡಬೇಕಿದೆ. ಅಡಿಕೆ ತೋಟಕ್ಕೆ ಪ್ರತಿ ಎಕರೆಗೆ 2.50 ಕೋಟಿ ರೂ. ನೀಡಬೇಕು. ನಿರಾಶ್ರಿತ ಕುಟುಂಬಗಳಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಪಡೆದುಕೊಳ್ಳಲು ಬಂದಾಗ ರೈತರು, ಮನವಿಯನ್ನು ಡಿಸಿ ಅವರಿಗೆ ನೀಡುವುದಾಗಿ ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿಯವರು ಆಗಮಿಸಿ, ಮನವಿ ಪತ್ರ ಸ್ವೀಕರಿಸಿದರು.
ಪ್ರತ್ಯೇಕ ಹೋರಾಟ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಹಾಲಿ ಹಾರನಹಳ್ಳಿ ಗ್ರಾಮವನ್ನು ತಲುಪದೆ, ಗ್ರಾಮದ ಹೊರಗೆ ಹೊಸ ಮಾರ್ಗ ಕಲ್ಪಿಸಲಿದೆ. ಇದರಿಂದ ಹಾರನಹಳ್ಳಿ ಗ್ರಾಮಸ್ಥರು, ರೈಲ್ವೆ ಜಂಕ್ಷನ್ ಹೋರಾಟ ಸಮಿತಿ ರಚನೆ ಮಾಡಿಕೊಂಡು ಡಿಸಿ ಕಚೇರಿ ಎದುರು ಹೋರಾಟ ನಡೆಸುತ್ತಿದ್ದಾರೆ.